ಬೈಂದೂರು: ರಸ್ತೆ ಸರಿ ಇಲ್ಲ ಎಂದು ಜನಪ್ರತಿನಿಧಿಗಳಿಗೆ ಹೇಳಿ ಹೇಳಿ, ಪರಿಹಾರ ಸಿಗದೇ ಇದ್ದಾಗ, ಕೊನೆಗೆ ಪ್ರಧಾನಿಗೆ ಪತ್ರ ಬರೆದು, ಒಂದು ವರ್ಷ ಕಾದರೂ ಯಾವುದೇ ಪ್ರಯೋಜನವಾಗದ ಪರಿಸ್ಥಿತಿ ಈ ಊರಿನ ಜನರದ್ದು! ಹೌದು ,ಈ ಹೊಂಡ ಗುಂಡಿಯ ರಸ್ತೆ ಇರುವುದು ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬಿಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ.
ಇಲ್ಲಿನ ಕಂಚಿಕಾನ ನಾರಂಬಳ್ಳಿಯಿಂದ ಸಾಲಮಕ್ಕಿವರೆಗೆ ಎರಡೂವರೆ ಕಿಲೋಮೀಟರ್ ರಸ್ತೆ ಇದೆ. ಮೊದಲ 250 ಮೀಟರ್ ಕಾಂಕ್ರೀಟ್ ರಸ್ತೆ ಬಿಟ್ಟರೆ ಉಳಿದಂತೆ ಇದೇ ಮಣ್ಣಿನ ಹೊಂಡ ಗುಂಡಿ ಕೆಸರು ತುಂಬಿದ ರಸ್ತೆ. ಈ ರಸ್ತೆಯಲ್ಲಿ ಸುಮಾರು 500 ಮನೆಗಳಿದ್ದು ಅವರೆಲ್ಲ ಇದೇ ರಸ್ತೆಯನ್ನು ಅವಲಂಬಿಸಿದ್ದಾರೆ. ವಾಹನ ಸಂಚಾರಕ್ಕೆ ಬಿಡಿ, ನಡೆದುಕೊಂಡು ಹೋಗುವುದೂ ಈ ರಸ್ತೆಯಲ್ಲಿ ಕಷ್ಟ.
ಇನ್ನು ಶಾಲಾ ಮಕ್ಕಳು, ಕಚೇರಿಗೆ ಹೋಗುವವರು ಪಡುವ ಕಷ್ಟ ಹೇಳತೀರದು. 40 ವರ್ಷದಿಂದಲೂ ಜನ ಇದೇ ರಸ್ತೆಯನ್ನು ಅವಲಂಬಿಸಿದ್ದು, ಸ್ಥಳೀಯ ಜನ ಪ್ರತಿನಿಧಿಗಳ ಬಗ್ಗೆ ಬೇಸರಗೊಂಡ ಸುಬ್ರಮಣ್ಯ ಎಂಬುವರು, ಕಳೆದ ವರ್ಷ ಆಗಸ್ಟ್ 21 ರಂದು ಪ್ರಧಾನಿ ಮೋದಿ ಕಚೇರಿಗೆ ಇ ಮೇಲ್ ಮೂಲಕ ದೂರು ನೀಡಿದ್ದರು. ಅಲ್ಲಿಂದ ಜಿಲ್ಲಾ ಪಂಚಾಯತ್‌ಗೆ ಪರಿಶೀಲನೆ ಮಾಡುವಂತೆ ಸೂಚನೆ ಬಂದಿತ್ತು. ಅವರು ಪಂಚಾಯತ್‌ನಿಂದ ಇನ್ನೂ ರಸ್ತೆ ನೋಂದಣಿ ಆಗಿಲ್ಲ ಎನ್ನುವ ಉತ್ತರ ಕಳುಹಿಸಿ ಸುಮ್ಮನಾಗಿದ್ದಾರೆ.
ಹೀಗಾಗಿ ಈ ಊರಿನ ಜನರಿಗೆ ಮಳೆಗಾಲ ಬಂತು ಅಂದರೆ ಎಲ್ಲಿಲ್ಲದ ಬೇಸರ. ಕೆಸರು ರಸ್ತೆಯಲ್ಲೇ ಸಂಚರಿಸಲು ಕಷ್ಟವಾಗಿ, ಕೆಲ ಮಂದಿ ವಾಹನವನ್ನು ಬೇರೆ ಕಡೆ ಇಟ್ಟು ನಡೆದುಕೊಂಡು ಹೋಗುವ ಅನಿವಾರ್ಯತೆ ಈ ಗ್ರಾಮಸ್ಥರದ್ದು..
Kshetra Samachara
21/07/2022 07:31 pm