ಕುಂದಾಪುರ: ವಾರದಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಕುಂದಾಪುರ ಮತ್ತು ಬ್ರಹ್ಮಾವರ ತಾಲೂಕಿನ ಹಲವೆಡೆ ನೆರೆ ಬಂದಿದ್ದು ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗಿದೆ. ಮುಖ್ಯವಾಗಿ ಈ ಭಾಗದ ಗದ್ದೆ, ಕೃಷಿಭೂಮಿ ಜಲಾವೃತಗೊಂಡಿವೆ. ಹಲವು ಮನೆಗಳು ಜಲ ದಿಗ್ಬಂಧನಕ್ಕೊಳಗಾಗಿವೆ. ಸದ್ಯ ನೆರೆ ಇಳಿಯುತ್ತಿದ್ದರೂ ಇಲ್ಲಿನ ಜನಜೀವನ ಸುಧಾರಿಸಿಲ್ಲ.
ಕೋಟದ ನೆರೆ ಪೀಡಿತ ಮೂಡುಗಿಳಿಯಾರು, ಚಾರ್ಕೂರು ಕೋಟ ಹೈಸ್ಕೂಲ್ ಸಮೀಪ, ಬೆಟ್ಟಕ್ಕಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಭೇಟಿ ನೀಡಿದರು. ಡಿ.ಸಿ. ಜೊತೆಗೆ ಕಂದಾಯ ಅಧಿಕಾರಿಗಳು, ಸ್ಥಳೀಯಾಡಳಿತ ಮುಖ್ಯಸ್ಥರು ಭೇಟಿ ನೀಡಿ ಹಾನಿ ಕುರಿತು ಸಮೀಕ್ಷೆ ನಡೆಸಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ, ನೆರೆಹಾನಿ ಎದುರಿಸಲು ಹಾಗೂ ಸಂತ್ರಸ್ತರಿಗೆ ಅಗತ್ಯ ನೆರವು ನೀಡಲು ಜಿಲ್ಲಾಡಳಿತ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಸ್ಥಳೀಯ ಮಟ್ಟದ ಅಧಿಕಾರಿಗಳು ತಮ್ಮ ವ್ಯಾಪ್ತಿಯ ನೆರೆ ಪೀಡಿತ ಪ್ರದೇಶ, ಅಪಾಯಕಾರಿ ಸ್ಥಳಗಳ ಬಗ್ಗೆ ಜಾಗ್ರತೆ ವಹಿಸಬೇಕು.
ನೆರೆನೀರಿನ ಮಟ್ಟ ಏರುವ ಮುನ್ನ ಸ್ಥಳೀಯರ ಮನವೊಲಿಸಿ ಸ್ಥಳಾಂತರಗೊಳಿಸಬೇಕು. ಅದೇ ರೀತಿ ಜಾನುವಾರು ಮತ್ತು ಸಾಕು ಪ್ರಾಣಿಗಳನ್ನು ಕೂಡ ಸ್ಥಳಾಂತರಿಸಲು ಸಹಾಯ ಮಾಡಬೇಕು ಎಂದು ಸ್ಥಳೀಯಾಡಳಿತ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
Kshetra Samachara
11/07/2022 01:51 pm