ಮಂಗಳೂರು: ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಿವೃತ್ತ ಪೊಲೀಸ್ ಕಾನ್‌ಸ್ಟೇಬಲ್ ಪುತ್ರ ಹಾಗೂ ಅವರ ಸ್ನೇಹಿತ ಜೊತೆಗೂಡಿ ಬರೋಬ್ಬರಿ ಒಂದು ಕೋಟಿ ರೂ. ಮೊತ್ತದ ಈಡುಗಂಟನ್ನು ಇಟ್ಟಿದ್ದಾರೆ. ಈ ಬೃಹತ್ ಮೊತ್ತವನ್ನು ಅಲೋಶಿಯಸ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವಿಗೆ ಫಂಡ್ ಸ್ಥಾಪಿಸಿ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ನೆರವು ನೀಡಿದ್ದಾರೆ.
ಹೌದು. ಮಂಗಳೂರಿನ ಅಲೋಶಿಯಸ್ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ಎಂ.ವಿ.ನಾಯರ್ ಅವರು ಬ್ಯಾಂಕ್ ಚೇರ್ಮನ್ ಆಗಿ ನಿವೃತ್ತಿಗೊಂಡವರು. ಇವರು ನಿವೃತ್ತ ಪೊಲೀಸ್ ಕಾನ್‌ಸ್ಟೇಬಲ್ ಎಂ.ಕೆ.ನಾಯರ್ ಎಂಬುವರ ಪುತ್ರ. ಪೊಲೀಸ್ ಕಾನ್‌ಸ್ಟೇಬಲ್ ಆಗಿದ್ದರೂ ಇವರದ್ದು ಆರ್ಥಿಕವಾಗಿ ಹಿಂದುಳಿದ ಕುಟುಂಬವಾಗಿತ್ತು. ಆದರೂ ಎಂ.ವಿ.ನಾಯರ್ ಅವರು ತಮ್ಮ ಪದವಿ ವಿದ್ಯಾಭ್ಯಾಸಕ್ಕೆ ಮಂಗಳೂರಿನ ಅಲೋಶಿಯಸ್ ಕಾಲೇಜಿಗೆ ಬರುತ್ತಾರೆ. ಅಂದು ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ತಮ್ಮ ತಾಯಿ ಕೂಡಿಟ್ಟ ಡಬ್ಬಿ ಹಣವನ್ನು ಒಡೆದು ವಿದ್ಯಾಭ್ಯಾಸ ಪಡೆದಿದ್ದರು. ಅದಕ್ಕಾಗಿಯೇ ಇಂದು ತಮ್ಮಂತೆಯೇ ಪೊಲೀಸರ ಮಕ್ಕಳು ಸಂಕಷ್ಟಕ್ಕೆ ಒಗಬಾರದೆಂದು ಅವರು ದೊಡ್ಡ ಮೊತ್ತದ ಈಡುಗಂಟನ್ನು ಇಟ್ಟಿದ್ದಾರೆ.
ಅದಕ್ಕಾಗಿ ಬ್ಯಾಂಕ್ ಚೇರ್ಮನ್ ಆಗಿ ನಿವೃತ್ತಿಯಾದ ಬಳಿಕ ದೊರಕಿದ ಮೊತ್ತದಲ್ಲಿ 25 ಲಕ್ಷ ರೂಪಾಯಿಯನ್ನು ಪೊಲೀಸರ ಮಕ್ಕಳ ವಿದ್ಯಾಭ್ಯಾಸಕ್ಕೆ ಇಡಬೇಕೆಂದು ಚಿಂತನೆ ನಡೆಸುತ್ತಾರೆ. ಅದರ ಬಗ್ಗೆ ತಿಳಿದ ಹಾಂಗ್‌ಕಾಂಗ್ ನಲ್ಲಿರುವ ಇವರ ಸ್ನೇಹಿತ ಇ.ಎಸ್.ವೆಂಕಟ್ ಅವರು ಅದರ ಮೂರು ಪಟ್ಟು ಹೆಚ್ಚಿನ ಮೊತ್ತ 75 ಲಕ್ಷ ರೂ.ವನ್ನು ನೀಡುತ್ತಾರೆ. ಈ ಮೂಲಕ ಒಟ್ಟಾದ ಒಂದು ಕೋಟಿ ರೂ. ಮೊತ್ತವನ್ನು ಎಂವಿ ನಾಯರ್ ತಾನು ಕಲಿತ ಅಲೋಶಿಯಸ್ ಕಾಲೇಜಿನಲ್ಲಿ ಎಂವಿ ನಾಯರ್ & ವೆಂಕಟ್ ಎಂಡೋಮೆಂಟ್ ಫಂಡ್ ಸ್ಥಾಪಿಸಿದ್ದಾರೆ.
ಈ 1 ಕೋಟಿ ರೂ. ಮೊತ್ತದ ನಿಧಿಗೆ ಬ್ಯಾಂಕ್‌ನಲ್ಲಿ ಅಂದಾಜು 4 ಲಕ್ಷ ರೂ. ವಾರ್ಷಿಕ ಬಡ್ಡಿ ದೊರಕುತ್ತದೆ. ಇದು ತಲಾ 50 ಸಾವಿರ ರೂ. ನಂತೆ ಪೊಲೀಸರ 8 ಮಂದಿ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರಯೋಜನವಾಗಲಿದೆ. ಆರ್ಥಿಕ ಕಾರಣದಿಂದ ಯಾರೂ ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಈ ಹಿರಿಯ ನಾಗರಿಕರ ಸದಾಶಯ ಎಲ್ಲರಿಗೂ ಮಾದರಿಯಾಗಿದೆ.
Kshetra Samachara
27/05/2022 05:53 pm