ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯ ಡಯಾಲಿಸಿಸ್ ಘಟಕ ಹಲವು ಸಮಸ್ಯೆಗಳಿಂದ ಕೂಡಿದೆ. ಇದು ಬಡವರ ಆರೋಗ್ಯದ ಬಗ್ಗೆ ಇರುವ ನಿರ್ಲಕ್ಷ್ಯ ಧೋರಣೆ ಎತ್ತಿ ತೋರಿಸುತ್ತಿದೆ. ಇಲ್ಲಿ ಡಯಾಲಿಸಿಸ್‌ಗೆ ಅಗತ್ಯ ಇರುವ ರಾಸಾಯನಿಕ ಸಾಮಗ್ರಿ ಹಾಗೂ ಫಿಲ್ಟರ್ ಸಂಪೂರ್ಣ ಖಾಲಿಯಾಗಿರುವುದು ಗಂಭೀರ ವಿಚಾರ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆತಂಕ ವ್ಯಕ್ತಪಡಿಸಿದೆ.
ಬಡರೋಗಿಗಳು ಇದರಿಂದಾಗಿ ಹಲವು ಆರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದು, ಮುಂದಿನ ದಿನಗಳಲ್ಲಿ ರೋಗಿಗಳ ಸಾವು-ನೋವು ಸಂಭವಿಸುವ ದಿನಗಳು ದೂರವಿಲ್ಲ. ಇಂತಹ ಘಟನೆ ನಡೆದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ಮತ್ತು ರಾಜ್ಯ ಸರಕಾರವೇ ನೇರ ಹೊಣೆ ಎಂದು ತಿಳಿಸಿದೆ.
ಸೋಮವಾರ ಸಂಜೆಯೊಳಗೆ ಸಿಬ್ಬಂದಿಯ ಹಲವು ತಿಂಗಳಿಂದ ಬಾಕಿ ಇರುವ ವೇತನ ಪಾವತಿ ಹಾಗೂ ರಾಜ್ಯದ ಎಲ್ಲ ಡಯಾಲಿಸಿಸ್ ಘಟಕದಲ್ಲಿ ಖಾಲಿಯಾಗಿರುವ ರಾಸಾಯನಿಕ ಸಾಮಗ್ರಿ ಹಾಗೂ ಫಿಲ್ಟರ್ ಭರ್ತಿ ಮಾಡುವಲ್ಲಿ ಸರಕಾರ ವಿಫಲವಾದರೆ ಮಂಗಳವಾರ ಬೆಳಿಗ್ಗೆ 11ರಿಂದ ಉಡುಪಿ ಸರಕಾರಿ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಅನಿರ್ದಿಷ್ಟಾವಧಿ ಅಹೋರಾತ್ರಿ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅನ್ಸಾರ್ ಅಹಮದ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಯುವಶಕ್ತಿ ಕರ್ನಾಟಕದ ಪ್ರಮೋದ್ ಉಚ್ಚಿಲ್ , ಕರವೇಯ ಸುಧೀರ್ ಪೂಜಾರಿ, ಯೋಗೀಶ್ ಕುತ್ಪಾಡಿ, ಹನೀಫ್ ಕಾರ್ಕಳ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/11/2021 03:24 pm