ಮುಲ್ಕಿ: ಮುಲ್ಕಿ ರೈಲ್ವೆ ನಿಲ್ದಾಣದಲ್ಲಿ ಕಳೆದ ಒಂದು ವಾರದಿಂದ ಮುಂಬೈ ಸಹಿತ ಅನ್ಯ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ಪರೀಕ್ಷೆ ನಡೆಸುತ್ತಿದ್ದು ಗುರುವಾರ ನಿಲ್ದಾಣದಲ್ಲಿ ಗೊಂದಲಮಯ ವಾತಾವರಣ ಉಂಟಾಗಿ ಮಾತಿನ ಚಕಮಕಿ ನಡೆದಿದೆ
ಗುರುವಾರ ಬೆಳಿಗ್ಗೆ 8.35 ಮುಂಬೈನಿಂದ ಮತ್ಸ್ಯಗಂಧ ರೈಲು ಆಗಮಿಸಿದ್ದು ನಾಗರಪಂಚಮಿ ಸಹಿತ ಹಬ್ಬ-ಹರಿದಿನ ಆಚರಿಸಲು ಸುಮಾರು 175 ಕ್ಕೂಹೆಚ್ಚು ಪ್ರಯಾಣಿಕರು ಬಂದಿಳಿದಿದ್ದರು.
ಏಕಾಏಕಿ ಪ್ರಯಾಣಿಕರು ರೈಲಿನಿಂದ ಇಳಿದು ಕೋವಿಡ್ ಟೆಸ್ಟ್ ನಡೆಸಲು ಕೌಂಟರ್ ಬಳಿ ಬರುವಾಗ ಸರತಿಸಾಲಿನಲ್ಲಿ ನಿಲ್ಲಲು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದರೂ ಪ್ರಯಾಣಿಕರು ಸಹಕರಿಸದೆ ಗೊಂದಲಮಯ ವಾತಾವರಣ ಉಂಟಾಯಿತು.
ಈ ಸಂದರ್ಭ ಸ್ಥಳದಲ್ಲಿ ರಕ್ಷಣೆ ನೀಡಬೇಕಾದ ಮುಲ್ಕಿ ಠಾಣೆಯ ಪೊಲೀಸರು ಗೈರಾಗಿದ್ದು ಪ್ರಯಾಣಿಕರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತಿನ ಚಕಮಕಿ ನಡೆದು ನೂಕುನುಗ್ಗಲಿನ ವಾತಾವರಣ ಸೃಷ್ಟಿಯಾಗಿ ಕೆಲ ಪ್ರಯಾಣಿಕರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಮರೆತು ಗುಂಪುಗುಂಪಾಗಿ ಪ್ರತಿಭಟನೆ ನಡೆಸಿದಾಗ ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೆಳ್ಳಾಯರು, ಮತ್ತಿತರರು ಪ್ರಯಾಣಿಕರನ್ನು ಸಮಾಧಾನ ಪಡಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಪೊಲೀಸರ ಕೊರತೆಯಿಂದ ಕೆಲ ಪ್ರಯಾಣಿಕರು ಕೊರೊನಾ ಪರೀಕ್ಷೆ ನಡೆಸದೆ ಪರಾರಿಯಾಗಿದ್ದಾರೆ.
ಎಲ್ಲ ಮುಗಿದ ಮೇಲೆ ಪೊಲೀಸರು ಆಗಮಿಸಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ.
ರೈಲು ನಿಲ್ದಾಣದಲ್ಲಿ ಪೋಲಿಸ್ ರಕ್ಷಣೆ ಬಗ್ಗೆ ಪೊಲೀಸ್ ಅಧಿಕಾರಿಗಳಲ್ಲಿ ಪ್ರಶ್ನಿಸಿದಾಗ ಸಿಬ್ಬಂದಿ ಕೊರತೆ ಇದೆ ಎಂಬ ಉತ್ತರ ಬಂದಿದೆ.
ಮತ್ಸ್ಯಗಂಧ ರೈಲಿನಲ್ಲಿ ಮುಂಬೈ ಸಹಿತ ಅನ್ಯ ರಾಜ್ಯಗಳಿಂದ 175 ಪ್ರಯಾಣಿಕರು ಆಗಮಿಸಿದ್ದು 113 ಪ್ರಯಾಣಿಕರ ಕೋವಿಡ್ ವರದಿಯನ್ನು ನಮೂದಿಸಲಾಗಿದೆ. 62 ಪ್ರಯಾಣಿಕರ ಆರ್ ಟಿ ಪಿಸಿಆರ್, ರಾಪಿಡ್ ಟೆಸ್ಟ್ ನಡೆಸಲಾಗಿದೆ.
Kshetra Samachara
12/08/2021 02:30 pm