ವಿಶೇಷ ವರದಿ: ರಹೀಂ ಉಜಿರೆ
ಬೈಂದೂರು: ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮೊನ್ನೆ ಬಂದ ಭೀಕರ ಮಳೆ ಹಲವು ಅವಾಂತರಗಳನ್ನೇ ಸೃಷ್ಟಿಸಿದೆ. ತಾಲೂಕಿನ ಕುಗ್ರಾಮಗಳ ರಸ್ತೆ ಮತ್ತು ಮೋರಿಗಳು ಮಳೆ ಅಬ್ಬರಕ್ಕೆ ಕೊಚ್ಚಿ ಹೋಗಿವೆ. ಶಾಸಕರೇ... ನೀವೊಮ್ಮೆ ನಮ್ಮ ಗ್ರಾಮಕ್ಕೆ ಬಂದು ಹೋಗಿ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ತಾಲೂಕಿನ ನಿರೋಡಿ ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಜನರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೃಷಿ ಮಾಡಿಕೊಂಡಿರುವ ಮರಾಠ ಸಮುದಾಯದ ಈ ಜನ ಸಂಪರ್ಕ ಸೇತುವೆಯಾಗಿ ಸಣ್ಣ ಮೋರಿಯನ್ನು ಅವಲಂಬಿಸಿದ್ದರು. ಆದರೆ, ಧಾರಾಕಾರ ಮಳೆಗೆ ಮೋರಿ ಕುಸಿದಿದ್ದು, ಗ್ರಾಮಸ್ಥರು ಅತ್ತಿಂದಿತ್ತ ಸಂಚರಿಸುವುದೇ ಕಷ್ಟವಾಗಿದೆ.
ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ನಿರೋಡಿ, ತೀರಾ ಹಿಂದುಳಿದ ಗ್ರಾಮೀಣ ಪ್ರದೇಶ. ಸಂಪರ್ಕ ಸೇತುವೆ ಕುಸಿತದಿಂದ ಈ ಭಾಗದ ವಿದ್ಯಾರ್ಥಿಗಳು ಶಾಲೆಗೆ ಹೋಗದೆ ಮನೆಯಲ್ಲೇ ಉಳಿಯುವಂತಾಗಿದೆ. ಇತ್ತೀಚೆಗೆ 3 ಲಕ್ಷ ಖರ್ಚು ಮಾಡಿ ಇಲ್ಲಿ ಮೋರಿ ನಿರ್ಮಿಸಲಾಗಿತ್ತು. ಆದರೆ, ಒಂದೇ ಮಳೆಗೆ ಮೋರಿ ಕುಸಿದಿದ್ದರಿಂದ ಗುತ್ತಿಗೆದಾರರ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.
ಇದಲ್ಲದೆ, ಮಳೆ ಅಬ್ಬರಕ್ಕೆ ಎಕರೆ ಗಟ್ಟಲೆ ಕೃಷಿ ಭೂಮಿ ನಾಶವಾಗಿವೆ.
ಇಲ್ಲಿ ಹೊಳೆಗೆ ನಾಲ್ಕೂ ದಿಕ್ಕಿನಿಂದ ನೀರು ಹರಿಯುವುದರಿಂದ ಸೇತುವೆ ನಿರ್ಮಾಣವೊಂದೇ ಸದ್ಯಕ್ಕಿರುವ ಪರಿಹಾರ. ಸ್ಥಳೀಯ ಶಾಸಕರು ಈ ಗ್ರಾಮಕ್ಕೆ ಸುಸಜ್ಜಿತ ಸೇತುವೆ ವ್ಯವಸ್ಥೆ ಮಾಡಿಕೊಡುವ ಮೂಲಕ ಗ್ರಾಮಸ್ಥರ ನೆರವಿಗೆ ಧಾವಿಸಬೇಕಿದೆ.
Kshetra Samachara
06/08/2022 08:39 am