ಮಂಗಳೂರು: ಮಳೆಯ ಅವಘಡಗಳನ್ನು ತಪ್ಪಿಸಲು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸುವ ವಾರ್ ರೂಂಗಳನ್ನು ತೆರೆಯಲು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಸೂಚನೆ ನೀಡಿದ್ದಾರೆ.
ನಗರದ ಜಿಪಂನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಾರ್ ರೂಂಗಳಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ತುರ್ತು ದೂರವಾಣಿ ಸಂಖ್ಯೆ, ಅಧಿಕಾರಿಗಳ ನಿಯೋಜನೆ ಹಾಗೂ ಪರಿಹಾರ ನೀಡುವ ಕೆಲಸಗಳನ್ನು ಮಾಡಬೇಕು. ಜಿಲ್ಲೆಯನ್ನು ಪ್ರವೇಶಿಸುವ ಚಾರ್ಮಾಡಿ, ಶಿರಾಡಿ ಹಾಗೂ ಸಂಪಾಜೆ ಘಾಟ್ ಗಳಲ್ಲಿನ ಸ್ಥಿತಿಗತಿಗಳನ್ನು ಜಿಲ್ಲಾಧಿಕಾರಿ ಹಾಗೂ ಜಿಪಂ ಸಿಇಒ ಪರಿಶೀಲಿಸಬೇಕು. ಅಗತ್ಯವಿದ್ದಲ್ಲಿ ಬೆಂಗಳೂರಿನಲ್ಲಿ ಲೋಕೋಪಯೋಗಿ ಸಚಿವರು ಹಾಗೂ ಹಾಸನ ಜಿಲ್ಲಾಧಿಕಾರಿಯವರೊಂದಿಗೆ ಸಭೆ ನಡೆಸಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಸ್ತೆ ಕಾಮಗಾರಿ ಕೈಗೊಂಡಿರುವ ಸ್ಥಳಗಳಲ್ಲಿ ಅಪಘಾತವಾಗದಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕು. ರಸ್ತೆಯಲ್ಲಿ ನೀರು ಹರಿದು ಹೋಗಲು ಅಗತ್ಯ ಕ್ರಮಕೈಗೊಳ್ಳಬೇಕು. ಗಾಳಿ ಮಳೆಗೆ ಬೀಳುವ ವಿದ್ಯುತ್ ಕಂಬಗಳನ್ನು ತಕ್ಷಣ ದುರಸ್ತಿಗೊಳಿಸಬೇಕು. ಆರೋಗ್ಯ ಇಲಾಖೆ ಡೆಂಗ್ಯು ಹಾಗೂ ಮಲೇರಿಯಾ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕು. ಈ ಬಾರಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗಗಳು ಹರಡದಂತೆ ಎಲ್ಲಾ ರೀತಿಯ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕು ಎಂದರು.
ಈ ವೇಳೆ ವಿದ್ಯುತ್ ಆಘಾತದಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಲೈನ್ ಮನ್ ಧರಿಯಪ್ಪ ಮಹಾದೇವಪ್ಪ ತುಂಬುರಮಟ್ಟಿಯವರಿಗೆ ಸಚಿವ ಸುನಿಲ್ ಕುಮಾರ್ ಅವರು 10,73,415 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.
Kshetra Samachara
23/05/2022 10:58 pm