ಉಡುಪಿಯ ಕುಂದಾಪುರ, ದ.ಕ, ಉ.ಕ ಜಿಲ್ಲೆ ಸಹಿತ ಶಿವಮೊಗ್ಗದಲ್ಲಿ 30 ಕೋಟಿ ವೆಚ್ಚದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ವಸತಿ ಶಾಲೆ ಮಾಡಿದ್ದು ಮತ್ತೊಂದು ಶಾಲೆ ತೆರೆಯುವ ಪ್ರಸ್ತಾವನೆಯಿದೆ.
ಅವಕಾಶ ಸಿಕ್ಕಿದಲ್ಲಿ 30 ಜಿಲ್ಲೆಗೂ ಈ ನಾರಾಯಣ ಗುರು ಶಾಲೆ ತೆರೆಯುವ ಚಿಂತನೆಯಿದೆ. ಕೋಟಿಚೆನ್ನಯ್ಯರ ಹೆಸರಿನಲ್ಲಿ ರಾಜ್ಯದಲ್ಲಿ ಸೈನಿಕರ ತರಬೇತಿ ಶಿಬಿರ ಉಡುಪಿಯಲ್ಲಿ ಪ್ರಾರಂಭವಾಗಲಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರದ ವತಿಯಿಂದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ 30ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಮಾಜ ಕಟ್ಟುವ ಸಂದರ್ಭದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಕೂಡ ಸ್ಪಷ್ಟ ಗುರಿಯೊಂದಿಗೆ ಯಾವುದೇ ಅಭಿಪ್ರಾಯ ಬೇಧವಿಲ್ಲದೆ ಸಮಾನ ಮನಸ್ಕರಾಗಿ ಒಗ್ಗೂಡಿ ಕೆಲಸ ಮಾಡಿದಾಗ ಸಂಘಟನೆಯ ನಿಜಾರ್ಥ ಸಾರ್ಥಕಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಕುಂದಾಪುರ ಬಿಲ್ಲವ ಸಂಘ ಉಡುಪಿ ಜಿಲ್ಲೆಗೆ ಮಾದರಿ ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದ ನಾವು ಒಂದೇ ಸಮಾಜಕ್ಕೆ ಕೆಲಸ ಮಾಡಲು ಆಗುವುದಿಲ್ಲ. ಎಲ್ಲಾ ಸಮಾಜವನ್ನು ಒಟ್ಟಾಗಿ ಕೊಂಡೊಯ್ಯಬೇಕಾದ ಜವಾಬ್ದಾರಿಯಿರುತ್ತದೆ. ಎಲ್ಲಾ ಸಮಾಜದ ಜೊತೆ ಬಿಲ್ಲವ ಸಮಾಜಕ್ಕೂ ಕೂಡ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ. ಈಡಿಗ, ಬಿಲ್ಲವ ಅಭಿವೃದ್ಧಿ ನಿಗಮದ ಬಗ್ಗೆ ಎರಡು ಬಾರಿ ಸಿಎಂ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಕುಂದಾಪುರ ಶ್ರೀ ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಅಧ್ಯಕ್ಷ ಸುರೇಶ್ ಎಸ್. ಪೂಜಾರಿ ದೀಪ ಪ್ರಜ್ವಲನೆಗೈದರು.
ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಗುರುರಾಜ್ ಪೂಜಾರಿ, ಯಕ್ಷಗಾನ ಕಲಾವಿದ ಭಾಸ್ಕರ ಪೂಜಾರಿ ನಾಯ್ಕನಕಟ್ಟೆ ಅವರನ್ನು ಸನ್ಮಾನಿಸಲಾಯಿತು. 1100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಉದ್ಯಮಿ ಡಾ. ಗೋವಿಂದ ಬಾಬು ಪೂಜಾರಿ, ವಿಜಯ್ ಪಿ. ಪೂಜಾರಿ ಬಳ್ಕೂರು, ಧೀರಜ್ ಹೆಜಮಾಡಿ, ಶ್ರೀ ನಾರಾಯಣ ಗುರು ಯುವಕಮಂಡಲದ ಅಧ್ಯಕ್ಷ ಅಜಿತ್ ಪೂಬಾರಿ ರಂಗನಹಿತ್ಲು, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲಕಟ್ಟೆ ಇದ್ದರು.
ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಟ ಕಾರಂತ ಪ್ರತಿಷ್ಠಾನದ ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿ, ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ ವಂದಿಸಿದರು.
PublicNext
24/08/2022 05:22 pm