ಮೂಡುಬಿದಿರೆ: ಹೊಸ ಪ್ರಯೋಗ, ಹಲವು ಪ್ರಥಮಗಳಿಗೆ ಸಾಕ್ಷಿಯಾಗಿರುವ ಮೂಡುಬಿದಿರೆ ಕಂಬಳ ಮತ್ತೊಂದು ವಿಶೇಷತೆ ಎದಿರು ನೋಡುತ್ತಿದೆ. ಮೂಡುಬಿದಿರೆ ಕಂಬಳ ಕರೆಯ ಬಳಿ ತುಳುನಾಡಿನ ಪರಂಪರೆ ಬಿಂಬಿಸುವ ಗುತ್ತಿನ ಮನೆ ಶೈಲಿಯಲ್ಲಿ ವೇದಿಕೆ ನಿರ್ಮಾಣವಾಗುತ್ತಿದ್ದು, ಶೀಘ್ರ ಲೋಕಾರ್ಪಣೆಗೊಳ್ಳಲಿದೆ.
17 ವರ್ಷಗಳಿಂದ ಮೂಡುಬಿದಿರೆ ಕಡಲಕೆರೆಯಲ್ಲಿ ಕೋಟಿ- ಚೆನ್ನಯ ಜೋಡುಕರೆ ಕಂಬಳ ನಡೆಯುತ್ತಿದ್ದು, ಅಚ್ಚುಕಟ್ಟಿನ ವ್ಯವಸ್ಥೆಯಿಂದಾಗಿ ಮಾದರಿ ಕಂಬಳವೆಂದೇ ಜನಪ್ರಿಯ. 60 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಗುತ್ತಿನ ಮನೆ ಮಾದರಿ ವೇದಿಕೆ 100 ಫೀಟ್ ಉದ್ದ, 70 ಫೀಟ್ ಅಗಲವಿದೆ. ಏಕಕಾಲಕ್ಕೆ ಗಣ್ಯರ ಸಹಿತ 500 ಮಂದಿ ಕುಳಿತು ಕಂಬಳ ವೀಕ್ಷಿಸಬಹುದು.
ಬೃಹತ್ ಕಂಬಗಳು, 3 ಹಂತದಲ್ಲಿ ಮೇಲ್ಛಾವಣಿ ವಿನ್ಯಾಸವಿರುವಂತೆ ಯೋಜನೆ ರೂಪಿಸಲಾಗಿದೆ. ಶಾಸಕ, ಮೂಡುಬಿದಿರೆ ಕಂಬಳ ಸಮಿತಿ ಅಧ್ಯಕ್ಷ ಉಮಾನಾಥ ಕೋಟ್ಯಾನ್ ಮುತುವರ್ಜಿಯಲ್ಲಿ, ಎಂಆರ್ ಪಿಎಲ್ ಪ್ರಾಯೋಜಕತ್ವ ವಹಿಸಿದೆ. ಮಂಗಳೂರಿನ ಆನಂದ ಭಟ್ ವಿನ್ಯಾಸ ಮಾಡಿದ್ದು, ಮೂಡುಬಿದಿರೆ ಬೆನ್ನಿ ಮಾಥ್ಯೂ ಯೋಜನೆ ರೂಪಿಸಿದ್ದಾರೆ. ಗುತ್ತಿಗೆದಾರ ರಾಜೇಶ್ ಬಂಗೇರ ನೇತೃತ್ವದಲ್ಲಿ ಬೃಹತ್ ವೇದಿಕೆ ನಿರ್ಮಾಣಗೊಳ್ಳುತ್ತಿದೆ.
ಯುವ ಕಂಬಳ ಓಟಗಾರರಿಗೆ ಉಚಿತ ತರಬೇತಿ ಸಹಿತ ಕಂಬಳ ಕ್ಷೇತ್ರದ ಬೆಳವಣಿಗೆಗೆ ಪೂರಕ ಕೆಲಸ ಮಾಡುತ್ತಿರುವ ಗುಣಪಾಲ ಕಡಂಬ ಸಂಚಾಲಕತ್ವದ ಕಂಬಳ ಅಕಾಡೆಮಿ, ಮೂಡುಬಿದಿರೆ ಕಂಬಳ ಸಮಿತಿ ಹಾಗೂ ಸಾರ್ವಜನಿಕರ ಸಹಯೋಗದಲ್ಲಿ ಮೂಡುಬಿದಿರೆಯಲ್ಲಿ ಕಂಬಳ ಮ್ಯೂಸಿಯಂ ಮಾಡುವ ಚಿಂತನೆ ನಡೆಸುತ್ತಿದೆ. ಇದಕ್ಕೆ ಮೂಡುಬಿದಿರೆ ಕಂಬಳ ಕರೆ ಪ್ರದೇಶದಲ್ಲಿ ಜಾಗ ಗುರುತಿಸಿದ್ದು, ವಿನ್ಯಾಸವೂ ರಚನೆಯಾಗುತ್ತಿದೆ. 1.5 ಕೋಟಿ ವೆಚ್ಚದ ಯೋಜನೆಗೆ ಅದಾನಿ ಗ್ರೂಪ್ 50 ಲಕ್ಷ ರೂ. ಅನುದಾನ ಘೋಷಿಸಿದೆ. ಸುಸಜ್ಜಿತ ಕಟ್ಟಡ, ಸಭಾಂಗಣ, 6 ಕೋಣೆಗಳು, ಗ್ರಂಥಾಲಯ, ಕಂಬಳ ಪರಿಕರ ಜೋಡಿಸಲು ವಸ್ತು ಸಂಗ್ರಹಾಲಯಕ್ಕೆ ವಿಶಾಲ ಹಾಲ್ ಯೋಜನೆಯಲ್ಲಿದೆ.
Kshetra Samachara
09/11/2021 11:07 am