ವಿಶೇಷ ವರದಿ: ರಹೀಂ ಉಜಿರೆ
ಮಲ್ಪೆ: ಸಮುದ್ರ ಮಧ್ಯೆ ಅವಘಡಗಳು ಸಂಭವಿಸಿದಾಗ ತುರ್ತು ಸೇವೆಗಾಗಿ ಮಲ್ಪೆ ಕರಾವಳಿ ಕಾವಲು ಪೊಲೀಸ್ ಪಡೆಯಲ್ಲಿ ಒಂದೇ ಒಂದು ಸೀ-ಆಂಬುಲೆನ್ಸ್ ಇಲ್ಲ.ಸೀ ಆಂಬುಲೆನ್ಸ್ ಗಾಗಿ ಸರ್ಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗೆ ಈ ವರೆಗೂ ಮನ್ನಣೆ ದೊರಕಿಲ್ಲ.
ಹೌದು ,ಬರೋಬ್ಬರಿ 320 ಕಿ.ಮೀ. ಕರಾವಳಿಯ ಭದ್ರತೆ ಮತ್ತು ಕಾರ್ಯಾಚರಣೆ ಜತೆಗೆ ಸಮುದ್ರ ಮಧ್ಯೆ ಸಂಕಷ್ಟದಲ್ಲಿರುವ ಮೀನುಗಾರರನ್ನು ರಕ್ಷಿಸುವ ಕೆಲಸವನ್ನೂ ಕರಾವಳಿ ಕಾವಲುಪಡೆಗೆ ವಹಿಸಲಾಗಿದೆ. ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳುವ ಅನೇಕ ದೊಣಿಗಳು ಸಮುದ್ರ ಮಧ್ಯೆ ಅಪಘಾತಕ್ಕೆ ತುತ್ತಾಗುತ್ತಲೇ ಇರುತ್ತವೆ, ಈ ಸಂದರ್ಭದಲ್ಲಿ ಮೀನುಗಾರರ ರಕ್ಷಣೆಗೆ ಸೀ-ಆಂಬುಲೆನ್ಸ್
ಅಗತ್ಯವಾಗಿ ಬೇಕಾಗಿದೆ.ಆದರೆ ಈ ಬಗ್ಗೆ ಸಲ್ಲಿಸಿದ ಪ್ರಸ್ತಾವನೆ ನೆನೆಗುದಿಗೆ ಬಿದ್ದಿದೆ. ಕಳೆದ 10 ವರ್ಷಗಳಲ್ಲಿ 80ಕ್ಕೂ ಹೆಚ್ಚು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಸುಮಾರು 500ಕ್ಕೂ ಅಧಿಕ ಮಂದಿ ಮೀನುಗಾರರನ್ನು ಕಾವಲು ಪಡೆ ರಕ್ಷಿಸಿದೆ.ಇದಕ್ಕಿಂತ ಹೆಚ್ಚಾಗಿ ಸ್ಥಳೀಯ ಮುಳುಗು ತಜ್ಞರು ಹಲವರನ್ನು ಕಾಪಾಡಿದ್ದಾರೆ. ಸಮುದ್ರದಲ್ಲಿ ಆಂಬುಲೆನ್ಸ್ ಸೌಲಭ್ಯಗಳಿಲ್ಲದೆ ಇರುವುದರಿಂದ ಮೀನುಗಾರರು ಮತ್ತು ಪ್ರವಾಸಿಗರು ದಿನನಿತ್ಯ ಎಂಬಂತೆ ಜೀವಕಳೆದುಕೊಳ್ಳು ತ್ತಿದ್ದಾರೆ. ಆದ್ದರಿಂದ ಶೀಘ್ರ ಸೀ ಆಂಬುಲೆನ್ಸ್ ಒದಗಿಸುವಂತೆ ಮುಳುಗು ತಜ್ಞ ಈಶ್ವರ್ ಮಲ್ಪೆ ಒತ್ತಾಯಿಸಿದ್ದಾರೆ.
ಒಂದೆಡೆ ಸಮುದ್ರಸ್ನಾನಕ್ಕಿಳಿಯುವ ಪ್ರವಾಸಿಗರು ,ಇನ್ನೊಂದೆಡೆ ನಿತ್ಯ ಮೀನುಗಾರಿಕೆಗೆ ತೆರಳುವ ಮೀನುಗಾರರು.ಪ್ರಕೃತಿ ಯಾವಾಗ ಮುನಿಸಿಕೊಳ್ಳುತ್ತೋ ಹೇಳಲಾಗದು. ಕಡಲು ಮುನಿದಾಗಲೆಲ್ಲ ಸೀ ಆಂಬುಲೆನ್ಸ್ ಸಿದ್ಧ ಇದ್ದರೆ ಅಪಾಯಕ್ಕೆ ಸಿಲುಕಿದವರ ಜೀವ ಉಳಿಸಬಹುದು.ಇವತ್ತು ಬೆಳಿಗ್ಗೆ ಮೀನುಗಾರರೊಬ್ಬರು ನೀರಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಹೀಗೆ ನಿತ್ಯ ಜೀವಭಯ ಇರುವ ಸಮುದ್ರ ತೀರಕ್ಕೆ ಸರಕಾರ ತಕ್ಷಣ ಸುಸಜ್ಜಿತ ಸೀ ಅಂಬುಲೆನ್ಸ್ ಮಂಜೂರು ಮಾಡಬೇಕಿದೆ.
PublicNext
07/10/2022 08:25 pm