ಕುಂದಾಪುರ: ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಮತ್ತು ಸಾಗಾಟದ ವಿರುದ್ಧ ಕಾರ್ಯಚರಣೆ ನಿರಂತರವಾಗಿ ನಡೆಯುತ್ತಿದೆ. ಸಾಕಷ್ಟು ಪ್ರಮಾಣದಲ್ಲಿ ದಂಡ ಸಂಗ್ರಹಿಸಿದ್ದೇವೆ. ಯಾವುದೇ ರೀತಿಯ ಅಕ್ರಮಗಳನ್ನು ಸಹಿಸುವುದಿಲ್ಲ. ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಇನ್ನೊಂದೆಡೆ ಅಕ್ರಮಗಳು ನಡೆಯುತ್ತಲೇ ಇವೆ.
ಜಿಲ್ಲೆಯಲ್ಲಿ ಈ ತನಕ ಅತ್ಯಂತ ಹೆಚ್ಚು ದಂಡವನ್ನು ವಸೂಲಿ ಮಾಡಲಾಗಿದೆ. ಕಟ್ಟಡ ಕಲ್ಲು, ಸಾಮಾನ್ಯ ಮರಳು, ಕಪ್ಪೆ ಚಿಪ್ಪು, ಲ್ಯಾಟರೈಟ್, ಅಲಂಕಾರಿಕ ಶಿಲೆ, ಸಿಲಿಕಾ ಮರಳು, ಜೇಡಿಮಣ್ಣು ಮತ್ತು ಎಂ-ಸ್ಯಾಂಡ್ ಸಾಗಾಟ ಹಾಗೂ ಗಣಿಗಾರಿಕೆಗೆ ಸಂಬಂಧಿಸಿ ಕಾನೂನುಬಾಹಿರವಾಗಿ ನಡೆದಿರುವ ಘಟನೆಗಳಲ್ಲಿ ಪ್ರತ್ಯೇಕವಾಗಿ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಲಾಗಿದೆ.
ಎಷ್ಟು ದಂಡ?
2020-21ನೇ ಸಾಲಿನಲ್ಲಿ ಖನಿಜ ಸಾಗಾಣಿಕೆಯಲ್ಲಿ 204 ಕೇಸು ದಾಖಲಿಸಿ 60.48 ಲಕ್ಷ ರೂ. ದಂಡ ಮತ್ತು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿ 170 ದಾಳಿ ನಡೆಸಿ 35 ಕೇಸು ದಾಖಲಿಸಿ 79 .19 ಲಕ್ಷ ರೂ., ದಂಡ ಸಂಗ್ರಹಿಸಲಾಗಿತ್ತು. 2021-22ನೇ ಸಾಲಿನ ಖನಿಜ ಸಾಗಾಣಿಕೆ ಕೇಸಿನಲ್ಲಿ 232 ಪ್ರಕರಣದಲ್ಲಿ 68.56 ಲಕ್ಷ ರೂ., ಗಣಿಗಾರಿಕೆಯಲ್ಲಿ 190 ಪ್ರಕರಣದಲ್ಲಿ 86.63 ಲಕ್ಷ ರೂ. ದಂಡವನ್ನು ಸಂಗ್ರಹಿಸಲಾಗಿದೆ.
ಆದರೂ ದಂಡಕ್ಕೆ ಬಗ್ಗದ ದಂಧೆಕೋರರು ಅಕ್ರಮಗಳನ್ನು ಮಾಡುತ್ತಲೇ ಇದ್ದಾರೆ. ಕೇವಲ ಕಾಟಾಚಾರದ ದಾಳಿಗಳಿಂದ ಯಾವುದೇ ಪ್ರಯೋಜನವೂ ಇಲ್ಲ. ಕುಂದಾಪುರ, ಬ್ರಹ್ಮಾವರ ಮತ್ತಿತರ ಕಡೆಗಳಲ್ಲಿ ರಾತ್ರಿ ವೇಳೆ ನಡೆಯುವ ಅಕ್ರಮ ಕಲ್ಲು ಮತ್ತು ಮರಳು ಗಣಿಗಾರಿಕೆ ನಿಯಂತ್ರಣದ ವಿಷಯದಲ್ಲಿ ಅಧಿಕಾರಿಗಳು ವಿಶೇಷ ಮುತುವರ್ಜಿ ವಹಿಸಬೇಕಾಗಿದೆ.
ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
Kshetra Samachara
16/09/2022 06:32 pm