ಸುಳ್ಯ.ಮರ್ಕಂಜದ ಅಳವುಪಾರೆ ಎಂಬಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಲ್ಲಿ ಸ್ಪೋಟಕಗಳನ್ನು ಬಳಸಿ ಬಂಡೆಕಲ್ಲುಗಳನ್ನು ಒಡೆಯಲಾಗುತ್ತಿದ್ದು, ಇದರಿಂದಾಗಿ ಗಣಿಗಾರಿಕೆ ನಡೆಯುತ್ತಿರುವ ಪಕ್ಕದ ಮನೆಗಳು ಬಿರುಕು ಬಿಟ್ಟಿದೆ ಎಂದು ಸ್ಥಳೀಯ ಮಹಿಳೆಯೊಬ್ಬರು ಸುಳ್ಯ ತಹಶೀಲ್ದಾರರಿಗೆ ದೂರು ನೀಡಿದ ಘಟನೆ ವರದಿಯಾಗಿದೆ.
ಮರ್ಕಂಜ ದ ಅಳವುಪಾರೆ ಎಂಬಲ್ಲಿ ಕೆಲವು ಸಮಯಗಳಿಂದ ಡೆಲ್ಮಾ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಗಣಿಗಾರಿಕೆ ಆರಂಭವಾಗುವ ಮೊದಲು ಊರವರು ಒಟ್ಟಾಗಿ ಗಣಿಗಾರಿಕೆ ಆರಂಭವಾದರೆ ಪ್ರಕೃತಿ ವಿಕೋಪ ದಂತಹ ಸಮಸ್ಯೆಗಳು ಎದುರಾಗಬಹುದು. ಅಲ್ಲದೇ ಸ್ಥಳೀಯವಾಗಿ ಇರುವ ಶಾಲೆ, ದೇವಸ್ಥಾನ, ಕಾಲೋನಿ ಮನೆಗಳಿಗೆ ಹಾನಿ ಸಂಭವಿಸಬಹುದು, ಕುಡಿಯುವ ನೀರಿಗೂ ಸಮಸ್ಯೆ ಯಾಗಬಹುದೆಂದು ವಿರೋಧ ವ್ಯಕ್ತಪಡಿಸಿದ್ದರು. ಊರವರ ಪರ-ವಿರೋಧಗಳ ಮಧ್ಯೆ ಕಲ್ಲು ಗಣಿಗಾರಿಕೆ ಆರಂಭಗೊಂಡಿತು. ಇದೀಗ ಬಂಡೆಕಲ್ಲುಗಳನ್ನು ಸ್ಪೋಟಿಸಲು ಬಳಸುವ ಸ್ಪೋಟಕಗಳಿಂದಾಗಿ ಕಿ.ಮಿ.ಗಿಂತಲೂ ದೂರದವರೆಗೆ ಭೂಮಿ ಕಂಪಿಸುವಂತೆ ಆಗುತ್ತಿದೆ. ಪರಿಣಾಮ ಮನೆಗಳು ಬಿರುಕು ಬಿಡಲು ಆರಂಭವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಅಲ್ಲದೆ ಸ್ಥಳೀಯರಾದ ವೇದಾವತಿ ಎಂಬವರು ಕಷ್ಟಪಟ್ಟು ಮನೆ, ಶೌಚಾಲಯ, ಕೊಟ್ಟಿಗೆ ಕಟ್ಟಿದ್ದೇವೆ. ಈಗ ಅದೆಲ್ಲವೂ ಬಿರುಕು ಬಿಡುತ್ತಿದೆ. ದಿನದಲ್ಲಿ ಮೂರ್ನಾಲ್ಕು ಬಾರಿ ಸ್ಪೋಟದ ಸದ್ದು ಕೇಳುತ್ತಿದೆ. ಭೂಮಿ ಕಂಪಿಸುತ್ತಿದೆ. ನನ್ನ ಗಂಡ ಅನಾರೋಗ್ಯದಿಂದಿದ್ದಾರೆ. ಸ್ಪೋಟದ ಶಬ್ದದಿಂದ ಆರೋಗ್ಯದ ಮೇಲೆಯೂ ತೀವ್ರ ಪರಿಣಾಮ ಬೀರುತ್ತಿದೆ. ಅಕ್ರಮವಾಗಿ ನಡೆಯುತ್ತಿರುವ ಕಲ್ಲಿನ ಕೋರೆಯ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಸೂಕ್ತ ತನಿಖೆ ನಡೆಸಿ, ನಮಗೆ ನ್ಯಾಯ ಒದಗಿಸಿಕೊಡಬೇಕೆಂದು ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.
Kshetra Samachara
25/04/2022 10:27 pm