ಉಡುಪಿ: ನಗರದ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಸಮೀಪ ಹಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಮೀನು ಮಾರುಕಟ್ಟೆಯನ್ನು ಉಡುಪಿ ನಗರಸಭೆ ತೆರವುಗೊಳಿಸಿದೆ.
ಅನಧಿಕೃತ ಎಂಬ ಕಾರಣ ಮುಂದಿಟ್ಟು ಎರಡು ಬುಲ್ಡೋಜರ್ ಬಳಸಿ ಮೀನು ಮಾರಕಟ್ಟೆಯನ್ನು ನಗರಸಭೆ ಅಧಿಕಾರಿಗಳು ತೆರವುಗೊಳಿಸಿದರು.
ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡ ಕೃಷ್ಣ ಮೂರ್ತಿ ಆಚಾರ್ಯ ಸೇರಿದಂತೆ ಸ್ಥಳೀಯರು ನಗರಸಭೆ ಅಧಿಕಾರಿಗಳ ಜೊತೆಗೆ ವಾಗ್ವಾದ ನಡೆಸಿದರು. ಏಕಾಏಕಿ ನೋಟಿಸ್ ನೀಡದೆ ಮಾರುಕಟ್ಟೆ ತೆರವುಗೊಳಿಸಬೇಡಿ. ಮೀನು ಮಾರುಕಟ್ಟೆ ಧ್ವಂಸ ಮಾಡುವ ಮೂಲಕ ಬಡ ಮೀನು ಮಾರಾಟಗಾರರ ಹೊಟ್ಟೆಗೆ ಹೊಡೆಯಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡರು.
ಆದರೆ ನಗರಸಭೆ ಅಧಿಕಾರಿಗಳು ಇದಕ್ಕೆ ಕ್ಯಾರೇ ಎನ್ನಲಿಲ್ಲ. ಇದು ಅನುಮತಿ ಇಲ್ಲದೆ ಅನಧಿಕೃತವಾಗಿ ಕಾರ್ಯಚರಿಸುತ್ತಿದೆ. ಹಾಗಾಗಿ ಕಾನೂನು ಪ್ರಕಾರ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು. ಮಾರುಕಟ್ಟೆ ಕಟ್ಟಡ ತೆರವು ಕಾರ್ಯಾರಣೆಯ ವೇಳೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದ್ದು ,ಸ್ಥಳೀಯರ ವಿರೋಧದ ನಡುವೆಯೇ ಕಟ್ಟಡ ನೆಲಸಮಗೊಳಿಸಲಾಯಿತು.
Kshetra Samachara
26/08/2022 05:46 pm