ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ನಗರಸಭೆಯಿಂದ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ!

ಉಡುಪಿ ನಗರಸಭೆ ನಿನ್ನೆ ಬಡ ಮೀನುಗಾರ ಮಹಿಳೆಯರ ಮೇಲೆ ಪ್ರಹಾರ ಮಾಡಿದೆ.ನಿರ್ಮಾಣ ಹಂತದಲ್ಲಿದ್ದ ಮೀನು ಮಾರುಕಟ್ಟೆಯನ್ನು ನೆಲಸಮ ಮಾಡಿದೆ. ಆರು ಜನ ಮಹಿಳೆಯರು ತುತ್ತು ಅನ್ನಕ್ಕಾಗಿ ಕಟ್ಟಿಸಿಕೊಂಡ ಆಶ್ರಯವನ್ನು ಅನಧಿಕೃತ ಎಂಬ ನೆಪ ಮುಂದಿಟ್ಟು ಪುಡಿಗಟ್ಟಿದ್ದು ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈಕೆಯನ್ನೊಮ್ನೆ ನೋಡಿ.ಕಳೆದ ಐವತ್ತು ವರ್ಷಗಳಿಂದ ನಗರದ ಕಿನ್ನಿಮೂಲ್ಕಿಯಲ್ಲಿ ರಸ್ತೆ ಬದಿ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದರು.ಉಳಿದ ಮಹಿಳೆಯರೂ ನಲ್ವತ್ತು ವರ್ಷಗಳಿಂದ ಮೀನು ಮಾರಿ ಜೀವನ ಸಾಗಿಸುತ್ತಿದ್ದರು.ಗಾಳಿ ಮಳೆ ಬಿಸಿಲು ಎನ್ನದೆ ರಸ್ತೆ ಬದಿ ಮೀನು ಮಾರುತ್ತಿದ್ದ ಈ ಮಹಿಳೆಯರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡ ಕೃಷ್ಣಮೂರ್ತಿ ಆಚಾರ್ಯ ಸೂರು ನಿರ್ಮಿಸಿಕೊಟ್ಟರು.ಮಳೆ ಬಿಸಿಲಿಗೆ ಸೂರಿನಡಿ ಮೀನು ಮಾರಾಟ ಮಾಡಲಿ ಎಂಬ ಉದ್ದೇಶ ಅವರದ್ದು.ಇನ್ನೇನು ಮಾರುಕಟ್ಟೆ ಪೂರ್ಣಗೊಂಡು ಆಶ್ರಯ ಪಡೆಯಲು ಮೀನುಗಾರ ಮಹಿಳೆಯರು ತುದಿಗಾಲಲ್ಲಿ ನಿಂತಿದ್ದರು.

ಇಷ್ಟಾಗುತ್ತಲೇ ನಗರಸಭೆ ಅಧಿಕಾರಿಗಳು ಜಾಗೃತರಾಗಿದ್ದಾರೆ. ಏಕಾಏಕಿ ಅಕ್ರಮ ನಿರ್ಮಾಣ ಎಂಬ ನೆಪ ಮುಂದಿಟ್ಟು ಮೀನು ಮಾರುಕಟ್ಟೆಯನ್ನು ನೆಲಸಮ ಮಾಡಿದ್ದಾರೆ.ಇದೀಗ ಮಹಿಳೆಯರು ರಸ್ತೆ ಬದಿ ,ಈ ಹಿಂದಿನಂತೆ ಬಿಸಿಲಿನಲ್ಲಿ ಮೀನು ಮಾರುತ್ತಾ ಕಣ್ಣೀರಾಗುತ್ತಿದ್ದಾರೆ.

ಹಾಗೆ ನೋಡಿದರೆ ನಗರದಲ್ಲಿ ಅಕ್ರಮ ,ಅನಧಿಕೃತ ಕಟ್ಟಡಗಳಿಗೆ ಲೆಕ್ಕವೇ ಇಲ್ಲ.ಸೆಟ್ ಬ್ಯಾಕ್ ಬಿಡದ ಹಲವು ಕಟ್ಟಡಗಳೂ ಇವೆ. ಅನುಮತಿ ಇಲ್ಲದೆ ಹೆಚ್ಚು ಫ್ಲೋರ್ ಕಟ್ಟಲಾದ ಮಳಿಗೆಗಳಿವೆ.ಪ್ರತೀ ನಗರಸಭೆ ಮೀಟಿಂಗಲ್ಲೂ ಈ ಕುರಿತು ಚರ್ಚೆಗಳಾಗುತ್ತವೆ.ಅಕ್ರಮ ಕಟ್ಟಡಗಳ ಪಟ್ಟಿ ಹಲವು ವರ್ಷಗಳಿಂದ ನಗರಸಭೆ ಅಧಿಕಾರಿಗಳ ಬಳಿ ಇದ್ದರೂ ಪ್ರಭಾವಿಗಳನ್ನು ರಕ್ಷಿಸಲಾಗುತ್ತಿದೆ.ಆದರೆ ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಎಂಬಂತೆ ಈ ಬಡ ಮೀನುಗಾರ ಮಹಿಳೆಯರ ಮೇಲೆ ಗದಾಪ್ರಹಾರ ಮಾಡಿದೆ.

ಇದೀಗ ಕಣ್ಣೀರು ಹಾಕುತ್ತಿರುವ ಮೀನುಗಾರ ಮಹಿಳೆಯರು ನಗರಸಭೆಗೆ ಹಿಡಿಶಾಪ ಹಾಕುತ್ತಾ ಮೀನು ಮಾರಾಟದಲ್ಲಿ ತೊಡಗಿದ್ದಾರೆ. ಮೀನು ಮಾರುಕಟ್ಟೆಯನ್ನು ಕೆಡವಿದ ನಗರಸಭೆಯೇ ಪರ್ಯಾಯ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ. ಇವರ ಕೂಗು ಜನಪ್ರತಿನಿಧಿಗಳಿಗೆ ಇನ್ನಾದರೂ ಕೇಳಿಸಲಿ ಎಂಬುದು ನಮ್ಮ ಆಶಯ.

ವಿಶೇಷ ವರದಿ: ರಹೀಂ ಉಜಿರೆ

Edited By :
PublicNext

PublicNext

27/08/2022 03:31 pm

Cinque Terre

32.39 K

Cinque Terre

3

ಸಂಬಂಧಿತ ಸುದ್ದಿ