ಬಂಟ್ವಾಳ: ಉತ್ತರ ಪ್ರದೇಶದಲ್ಲಿ ದಲಿತ ಯುವತಿ ಮೇಲಿನ ಲೈಂಗಿಕ ದೌರ್ಜನ್ಯ ಖಂಡಿಸಿ ಭಾರತೀಯ ಮಹಿಳಾ ಒಕ್ಕೂಟ ಹಾಗೂ ಅಖಿಲ ಭಾರತ ಯುವಜನ ಫೆಡರೇಶನ್ ಆಶ್ರಯದಲ್ಲಿ ಶುಕ್ರವಾರ ಬಿ.ಸಿ. ರೋಡಿನ ಮಿನಿವಿಧಾನ ಸೌಧದ ಮುಂಭಾಗ ಪ್ರತಿಭಟನೆ ನಡೆಯಿತು.
ಭಾರತೀಯ ಮಹಿಳಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಭಾರತಿ ಪ್ರಶಾಂತ್ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬರುವ ಸಂದರ್ಭ ಈ ದೇಶದ ದಲಿತ, ವಿದ್ಯಾರ್ಥಿ, ಯುವಜನ ಮಹಿಳೆಯರಿಗೆ ಪೂರಕ ಕಾನೂನು ಜಾರಿಗೆ ತರುವ ಆಶ್ವಾಸನೆಯೊಂದಿಗೆ ಪ್ರತಿ ಹೆಣ್ಣು ಮಗಳು ರಕ್ಷಣೆ ಮತ್ತು ಶಿಕ್ಷಣ ಪಡೆಯುವಂತಾಗಬೇಕು ಎಂಬ ಇರಾದೆಯೊಂದಿಗೆ ಬೇಟಿ ಬಚಾವೋ, ಬೇಟಿ ಪಡಾವೋ ಎಂಬ ಘೋಷಣೆ ನೀಡಿತ್ತು.
ಆದರೆ ಅಧಿಕಾರ ಚುಕ್ಕಾಣಿ ಹಿಡಿದು ೬ ವರ್ಷ ಕಳೆದಿದೆ. ಅದರೆ ಸರಕಾರದ ಘೋಷಣೆ ಈಡೇರುವ ಬದಲಾಗಿ ಹೆಣ್ಣು ಮಕ್ಕಳು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಎಐವೈಎಫ್ ನ ಬಂಟ್ವಾಳ ತಾಲೂಕು ಅಧ್ಯಕ್ಷ ಪ್ರೇಮನಾಥ ಕೆ., ಸಿಪಿಐ ತಾಲೂಕು ಕಾರ್ಯದರ್ಶಿ ಬಿ.ಶೇಖರ್ ಮಾತನಾಡಿದರು. ನೇತೃತ್ವವನ್ನು ಮಹಿಳಾ ಒಕ್ಕೂಟದ ಜಿಲ್ಲಾ ಉಪಾಧ್ಯಕ್ಷೆ ವನಜಾಕ್ಷಿ ಬಿ.ಎಸ್., ಕೋಶಾಧಿಕಾರಿ ಸರಸ್ವತಿ ಕಡೇಶಿವಾಲಯ, ಕೇಶವತಿ, ಮಮತಾ, ಎಐವೈಎಫ್ ತಾಲೂಕು ಕಾರ್ಯದರ್ಶಿ ಶ್ರೀನಿವಾಸ ಭಂಡಾರಿ, ಮುಖಂಡರಾದ ಸುಕೇಶ್ ಬಿ.ಸಿ.ರೋಡು, ಹರ್ಷಿತ್ ಸುವರ್ಣ ಬಂಟ್ವಾಳ, ಎಂ.ಬಿ. ಭಾಸ್ಕರ, ಕಮಲಾಕ್ಷ ಭಂಡಾರಿ, ವಿದ್ಯಾರ್ಥಿ ನಾಯಕ ಹರ್ಷಿತ್ ರಾಜ್, ಕಾರ್ಮಿಕ ಮುಖಂಡ ಬಾಬು ಭಂಡಾರಿ ವಹಿಸಿದ್ದರು. ಎಐವೈಎಫ್ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್ ಸ್ವಾಗತಿಸಿ, ವಂದಿಸಿದರು.
Kshetra Samachara
02/10/2020 04:00 pm