ಕಡಬ: ನೀವು ಈ ಕಾಣುತ್ತಿರುವ ಕಟ್ಟಡ ಬಹಳ ವರ್ಷಗಳ ಪುರಾತನ ಕಟ್ಟಡವೇನು ಅಲ್ಲ.ಕೆಲವೇ ಕೆಲವು ವರ್ಷಗಳ ಹಿಂದೆ ಪಂಚಾಯತ್ ವತಿಯಿಂದ ಹಸಿಮೀನು ಮಾರಾಟಕೋಸ್ಕರ ಸಾರ್ವಜನಿಕರ ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪಂಚಾಯತ್ ಕಟ್ಟಿಸಿದ ಸುಸಜ್ಜಿತವಾದ ಕಟ್ಟಡ. ಆದರೆ ಇದರ ಇಂದಿನ ಸ್ಧಿತಿ ನೋಡಿದರೆ ಪಂಚಾಯತ್ ಗೆ ತೆರಿಗೆ ಪಾವತಿ ಮಾಡುವ ಪ್ರತಿಯೊಬ್ಬ ವ್ಯಕ್ತಿಗೂ ಬೇಸರವನ್ನು ಉಂಟು ಮಾಡಿಸುತ್ತಿದೆ.
ಹಸಿಮೀನು ಮಾರಾಟಕ್ಕೊಸ್ಕರ ಕಡಬದಲ್ಲಿ ನಿರ್ಮಾಣವಾದ ಈ ಕಟ್ಟಡದಲ್ಲಿ ವ್ಯವಸ್ಥಿತವಾದ ರೀತಿಯಲ್ಲೇ ಕೆಲವು ವರ್ಷಗಳ ಹಿಂದೆ ಮೀನು ವ್ಯಾಪಾರಗಳು ನಡೆಯುತ್ತಿತ್ತು.ಆ ಸಮಯದಲ್ಲಿ ದೊಡ್ಡ ಮಟ್ಟದ ಗೋಲ್ ಮಾಲ್ ನಡೆಸಲು ಪಂಚಾಯತ್ ಗೆ ಮತ್ತು ಮೀನು ವ್ಯಾಪಾರಿಗಳಿಗೆ ಸಾಧ್ಯವಾಗುತ್ತಿರಲಿಲ್ಲ.ಆಗ ಪಂಚಾಯತ್ ಮತ್ತು ವ್ಯಾಪಾರಿಗಳು ಸೇರಿ ಮಾಡಿದ ತಂತ್ರವೇ ಈ ಸುಸಜ್ಜಿತ ಕಟ್ಟಡದ ಇಂದಿನ ಈ ಅವನತಿಗೆ ಕಾರಣ ಎನ್ನುತ್ತಾರೆ ಸ್ಥಳೀಯರು.ಈ ಕಟ್ಟಡದಲ್ಲಿ ಮೀನು ವ್ಯಾಪಾರ ಮಾಡಿದ್ದಲ್ಲಿ ಅಕ್ಕಪಕ್ಕ ಎರಡರಿಂದ ಮೂರು ಮೀನು ವ್ಯಾಪಾರಿಗಳು ಇರುತ್ತಿದ್ದರು ಆಗ ಮೀನಿನ ದರದಲ್ಲಿ ದೊಡ್ಡ ಮಟ್ಟದ ವಂಚನೆ ನಡೆಯುತ್ತಿರಲಿಲ್ಲ.ಮಾತ್ರವಲ್ಲದೆ ಗ್ರಾಹಕರಗೂ ಉತ್ತಮ ಗುಣಮಟ್ಟದ ವಿವಿಧ ರೀತಿಯ ಮೀನುಗಳು ಲಭ್ಯವಾಗುತ್ತಿತ್ತು.
ಈ ಸಮಯದಲ್ಲಿ ಪಂಚಾಯತ್ ಗೆ ಆದಾಯವೂ ಹೆಚ್ಚಿಗೆ ಬರುತ್ತಿತ್ತು.ಆದರೆ ಸಾರ್ವಜನಿಕ ತೆರಿಗೆ ಹಣದಿಂದ ಮಾಡಿದ ಈ ಕಟ್ಟಡವನ್ನು ಅವನತಿಗೆ ತಳ್ಳಿ ಅಧಿಕಾರಿಗಳು, ಪಂಚಾಯತ್ ಆಡಳಿತ ಮಂಡಳಿ ಮತ್ತು ಜನಪ್ರತಿನಿಧಿಗಳು ಮೀನು ವ್ಯಾಪಾರಿಗಳಿಗೆ ರಸ್ತೆ ಬದಿಯಲ್ಲಿ ಕಡಬ ಪೇಟೆಯ ಎರಡು ಕಡೆಗಳಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಇದು ಇವಾಗ ಸಾರ್ವಜನಿಕರಿಗೆ ಸಂಕಷ್ಟಕೀಡು ಮಾಡುತ್ತಿದೆ. ಮಾತ್ರವಲ್ಲದೆ ಈ ರಸ್ತೆ ಬದಿಯ ವ್ಯಾಪಾರ ವಹಿವಾಟಿನಿಂದಾಗಿ ಮೀನು ವ್ಯಾಪಾರಿಗಳಿಗೆ ಪಂಚಾಯತ್ ಗೆ ಪಾವತಿ ಮಾಡುವ ಹಣ ಕಡಿಮೆ,ಗುಣಮಟ್ಟದ ಮೀನು ನೀಡಬೇಕಾಗಿಲ್ಲ ಮತ್ತು ತಮಗೆ ಮನಬಂದ ಹಾಗೇ ದರ ವಿಧಿಸಲೂ ಸಾಧ್ಯವಿದೆ ಎನ್ನಲಾಗಿದೆ .ಯಾವುದೇ ಒಬ್ಬ ಪಂಚಾಯತ್ ಅಧಿಕಾರಿಗಳು ಈ ಬಗ್ಗೆ ಇವರನ್ನು ವಿಚಾರಿಸಲು ಮುಂದಾಗಿಲ್ಲ.
ಇದು ಮೀನು ವ್ಯಾಪಾರಿಗಳಿಗೆ ವರದಾನವಾದರೆ,ಗ್ರಾಹಕರಿಗೆಹಣ ವಂಚನೆ ಜೊತೆಗೆ ಆರೋಗ್ಯ ಸಮಸ್ಯೆಗಳೂ ಆಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಕಳೆದ ತಿಂಗಳ 17ನೇ ತಾರೀಕಿಗೆ ಈ ರಸ್ತೆ ಬದಿಯ ಮೀನು ವ್ಯಾಪಾರಿಗಳ ಏಲಂ ದಿನಾಂಕ ಮುಕ್ತಾಯವಾಗಿದೆ. ಆದರೂ ಪತ್ರಿಕಾ ಪ್ರಕಟಣೆ ನೀಡಿ ಹೊಸ ಏಲಂ ಪ್ರಕ್ರಿಯೆ ನಡೆಸಲು ಕಡಬದ ಪಟ್ಟಣ ಪಂಚಾಯತ್ ಮುಂದಾಗಿಲ್ಲ.ಹೊಸ ಏಲಂ ಪ್ರಕ್ರಿಯೆ ನಂತರವಾದರೂ ಕಡಬದ ಮೀನು ಮಾರುಕಟ್ಟೆ ಕಟ್ಟಡವನ್ನು ಸೂಕ್ತ ರೀತಿಯಲ್ಲಿ ಸರಿಪಡಿಸಿ,ಮದ್ಯಪಾನದ ಅಡ್ಡೆಯಾಗಿ ಮಾಡದೇ ಈ ಕಟ್ಟಡದಲ್ಲಿ ಮೀನು ವ್ಯಾಪಾರ ಮಾಡಿಸುವ ಮೂಲಕ ಗ್ರಾಹಕರ ಜೇಬಿಗೆ ಬೀಳುತ್ತಿರುವ ಕತ್ತರಿಗೆ ಅಧಿಕಾರಿಗಳು ತಡೆ ಒಡ್ಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
Kshetra Samachara
04/11/2020 11:53 am