ಮಂಗಳೂರು: ವಿಮಾನ ಯಾನವನ್ನು ಮುಗಿಸಿ ಬರುತ್ತಿದ್ದ ವೇಳೆ ಯುವತಿಯೋರ್ವರು ಕಳೆದುಕೊಂಡ ಐಫೋನ್ ಕ್ಯಾಬ್ ಡ್ರೈವರ್ ಪ್ರಾಮಾಣಿಕತೆಯಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಭದ್ರತಾ ತಂಡದ ಮೂಲಕ ಮತ್ತೆ ಆಕೆಯ ಕೈಸೇರಿದೆ.
ಅಕ್ಟೋಬರ್ 7ರಂದು ತಡರಾತ್ರಿ ಜಿನ್ಶಾ ಎಂಬ ವೈದ್ಯಕೀಯ ವಿದ್ಯಾರ್ಥಿನಿಯನ್ನು ಇಮ್ತಿಯಾಝ್ ಎಂಬ ಕ್ಯಾಬ್ ಡ್ರೈವರ್ ಮಂಗಳೂರು ವಿಮಾನ ನಿಲ್ದಾಣದಿಂದ ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಗೆ ಡ್ರಾಪ್ ಮಾಡಿದ್ದಾರೆ. ಅಕ್ಟೋಬರ್ 8ರಂದು ಬೆಳಗ್ಗೆ ಅವರು ತಮ್ಮ ಕಾರನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಕಾರಿನೊಳಗಡೆ ಐಫೋನ್ ಕಂಡು ಬಂದಿದೆ. ತಕ್ಷಣ ಅವರು ಈ ವಿಚಾರವನ್ನು ವಿಮಾನ ನಿಲ್ದಾಣದ ಪಾರ್ಕಿಂಗ್ ಮೇಲ್ವಿಚಾರಕರ ಗಮನಕ್ಕೆ ತಂದಿದ್ದಾರೆ. ಅವರು ತಕ್ಷಣ ಈ ಬಗ್ಗೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಬಳಿಕ ಈ ಫೋನ್ ಅನ್ನು ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ಗೆ ಹಸ್ತಾಂತರ ಮಾಡಲಾಯಿತು. ಅವರು ಜಿನ್ಶಾಗೆ ಐಫೋನ್ ತಮ್ಮಲ್ಲಿರುವ ಬಗ್ಗೆ ಸಂದೇಶ ರವಾನಿಸಿದ್ದಾರೆ. ಬಳಿಕ ಜಿನ್ಶಾ ಅವರು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಗುರುತುಪತ್ತೆಯನ್ನು ಸೂಚಿಸಿ ತಮ್ಮ ಮೊಬೈಲ್ ಅನ್ನು ಪಡೆದುಕೊಂಡಿದ್ದಾರೆ. ಕಳೆದು ಹೋಗಿರುವ ಮೊಬೈಲ್ ಫೋನ್ ಅನ್ನು ಮರಳಿ ತಮ್ಮ ಕೈಸೇರವಂತೆ ಮಾಡಿದ ಕ್ಯಾಬ್ ಡ್ರೈವರ್ ಇಮ್ತಿಯಾಝ್, ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಜಿನ್ಶಾ ಕೃತಜ್ಞತೆ ಸಲ್ಲಿಸಿದ್ದಾರೆ.
Kshetra Samachara
10/10/2022 10:30 am