ಪಬ್ಲಿಕ್ ನೆಕ್ಸ್ಟ್ ವಿಶೇಷ ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಹೀಗೆ ಗದ್ಗದಿತರಾಗಿ ತಬ್ಬಿಕೊಂಡಿರುವ ತಂದೆ -ಮಗ ಒಬ್ಬರನ್ನೊಬ್ಬರ ಮುಖವನ್ನು ನೋಡಿರೋದು ಬರೋಬ್ಬರಿ 4 ವರ್ಷಗಳ ಬಳಿಕ. ಮಾನಸಿಕವಾಗಿ ಆಘಾತಗೊಂಡು ಕುಟುಂಬದಿಂದ ಬೇರ್ಪಟ್ಟ ಪುತ್ರನನ್ನು ಮತ್ತೆ ತಂದೆಯೊಂದಿಗೆ ಸೇರಿಸಿದ್ದು ಮಂಗಳೂರಿನ ವೈಟ್ ಡೌಸ್ ಸಂಸ್ಥೆ.
ಹೌದು...ವೈಟ್ ಡೌಸ್ ಸಂಸ್ಥೆ ಈತನಿಗೆ ಆಶ್ರಯ ನೀಡಿ ಮತ್ತೆ ಕುಟುಂಬವನ್ನು ಸೇರಿಸುವ ಕಾರ್ಯ ಮಾಡಿದೆ. 2019ರಲ್ಲಿ ನಗರದ ಪಾಂಡೇಶ್ವರದಲ್ಲಿ ಮಾನಸಿಕ ಅಸ್ವಸ್ಥನಾಗಿ ಅಲೆದಾಡುತ್ತಿದ್ದವನ ಬಗ್ಗೆ ವೈಟ್ ಡೌಸ್ ಸಂಸ್ಥೆಯ ಕೊರಿನ್ ರಸ್ಕಿನ್ ಅವರಿಗೆ ಮಾಹಿತಿ ಬರುತ್ತದೆ. ಅವರು ಆತನನ್ನು ಕರೆತಂದು ಶುಶ್ರೂಷೆ ಮಾಡಿ ತಮ್ಮ ಸಂಸ್ಥೆಯಲ್ಲಿ ಆಶ್ರಯ ನೀಡುತ್ತಾರೆ. ಈ ಆರೈಕೆಯಿಂದ ಕೊಂಚ ಚೇತರಿಸಿಕೊಂಡ ಆತ ತನ್ನ ಹೆಸರು ಶಿಬು, ಅಲಹಾಬಾದ್ ತನ್ನ ಊರು ಎಂದಷ್ಟೇ ಹೇಳಿದ್ದಾನೆ.
ಆದರೆ, ಇತ್ತೀಚೆಗೆ ಆತ ನೆನಪಿಸಿಕೊಂಡು ತನ್ನ ಊರಿನ ಬಳಿಯ ಶಾಲೆ ಹೆಸರು ಹೇಳುತ್ತಾನೆ. ಆತನ ಊರಿನ ಜಾಡು ಹಿಡಿದು ಹೊರಟ ವೈಟ್ ಡೌಸ್ ಸಂಸ್ಥೆಯ ಮ್ಯಾನೇಜರ್ ಗೆ ಶಿಬು ತಂದೆಯ ಮೊಬೈಲ್ ಸಂಖ್ಯೆ ದೊರೆಯುತ್ತದೆ. ವೀಡಿಯೋ ಕರೆಯಲ್ಲಿ ಅವರು ತಮ್ಮ ಪುತ್ರನನ್ನು ಗುರುತಿಸಿ ತಕ್ಷಣ ಅಲಹಬಾದ್ ನಿಂದ ರೈಲು ಹತ್ತಿ ಮಂಗಳೂರಿಗೆ ಬಂದಿದ್ದಾರೆ. 4 ವರ್ಷಗಳ ಬಳಿಕದ ತಂದೆ - ಮಗನ ಸಮಾಗಮ ಅಲ್ಲಿದ್ದವರ ಕಣ್ಣನ್ನು ಒದ್ದೆ ಮಾಡಿತು.
ಶಿಬು ನಿಜವಾದ ಹೆಸರು ಮೊಹಮ್ಮದ್ ತೋಹಿಬ್. ಈತ ತಮಿಳುನಾಡಿನ ಶಿವಕಾಶಿಯಲ್ಲಿ ಕೆಲಸ ಮಾಡುತ್ತಿದ್ದ. ತಂಗಿ ಹಾಗೂ ಈತನಿಗೆ ಕುಟುಂಬಸ್ಥರು ಮದುವೆ ಸಿದ್ಧತೆ ಮಾಡುತ್ತಾರೆ. ಮದುವೆಗೆ ಮಾಲೀಕ ಹಣ ಕೊಡುವುದಿಲ್ಲ. ಇದರಿಂದ ಆಘಾತಗೊಂಡು ರೈಲು ಹತ್ತಿದವ ಮಂಗಳೂರಿಗೆ ಬಂದು ಇಳಿದಿದ್ದಾನೆ. ಇಲ್ಲಿ ಬೀದಿ ಬೀದಿ ಅಲೆಯುತ್ತಿದ್ದವನಿಗೆ ವೈಟ್ ಡೌಸ್ ಆಶ್ರಯ ನೀಡುತ್ತದೆ. ಇದೀಗ ಮತ್ತೆ ಮೊದಲಿನಂತಾಗಿ ಮದುವೆಯ ಕನಸನ್ನು ಹೊತ್ತು ಕಣ್ಣಾಲಿ ಒದ್ದೆ ಮಾಡಿಕೊಂಡೇ ಮನೆಯತ್ತ ಹೊರಟಿದ್ದಾನೆ.
PublicNext
11/09/2022 08:16 pm