ಸುಬ್ರಹ್ಮಣ್ಯ: ಸಾಮಾನ್ಯವಾಗಿ ಮಕ್ಕಳು ಪ್ರವಾಸ, ಸುತ್ತಾಟ, ದೂರ ಸಂಚಾರಕ್ಕೆ ತಮ್ಮ ಸ್ನೇಹಿತರು, ತಮ್ಮ ಒಡನಾಡಿಗಳೊಂದಿಗೆ ತೆರಳಿ ಸಂಭ್ರಮಿಸುವುದು ಪ್ರಸ್ತುತ ದಿನದಲ್ಲಿ ನಾವು ಕಾಣುತ್ತೇವೆ. ಆದರೆ ಮೈಸೂರಿನ ಈ ಯುವಕನೊಬ್ಬ ತನ್ನ ತಾಯಿಯೊಂದಿಗೆ ದೇಶ ಸುತ್ತುತ್ತಾ, ತೀರ್ಥಯಾತ್ರೆ ಮಾಡುತ್ತಿದ್ದಾರೆ. ಇದೀಗ ಈ ಅಮ್ಮ-ಮಗ ದಕ್ಷಿಣ ಕನ್ನಡ ಜಿಲ್ಲಾ ಯಾತ್ರೆಯಲ್ಲಿದ್ದಾರೆ.
ಮೈಸೂರಿನ ಕೃಷ್ಣಕುಮಾರ್(44) ಹಾಗೂ ಅವರ ತಾಯಿ ಚೂಡ ರತ್ಮಮ್ಮ (72) ಎಂಬವರು ಜೊತೆಯಾಗಿ ಸ್ಕೂಟರ್ ಒಂದರಲ್ಲಿ ಸುತ್ತಾಟದಲ್ಲಿ ತೊಡಗಿದ್ದಾರೆ. ಸದ್ಯ ಇವರು ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಆಗಮಿಸಿದ್ದಾರೆ. ಕೃಷ್ಣ ಕುಮಾರ್ ಅವರು ಉದ್ಯೋಗದಲ್ಲಿದ್ದು, ಕೆಲ ವರ್ಷಗಳ ಹಿಂದೆ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಅವಿವಾಹಿತರಾಗಿರುವ ಕೃಷ್ಣ ಕುಮಾರ್ ತಮ್ಮ ತಾಯಿಯ ಜತೆ ಜೀವನ ಕಳೆಯುತ್ತಿದ್ದಾರೆ. ತಾಯಿಯ ಆಸೆಗಳನ್ನು ಈಡೇರಿಸುತ್ತಿದ್ದಾರೆ. ಅದಕ್ಕಾಗಿಯೇ ತಾಯಿ ಆಸೆ ಪಡುವ ಸ್ಥಳಗಳಿಗೆ ಕೃಷ್ಣ ಕುಮಾರ್ ಕರೆದೊಯ್ಯುತ್ತಿದ್ದಾರೆ.
2018ರಲ್ಲಿ ಮೈಸೂರಿನಿಂದ ಈ ತಾಯಿ, ಮಗ ಸುತ್ತಾಟ ಆರಂಭಿಸಿ ಬಹುತೇಕ ಭಾರತವನ್ನು ಸುತ್ತಿದ್ದಾರೆ. ಬಳಿಕ ನೇಪಾಳ, ಭೂತನ್, ಮಾಯನ್ಮಾರ್ ದೇಶಗಳಲ್ಲೂ ತಿರುಗಾಟ ನಡೆಸಿ ತಾಯಿಯ ಇಚ್ಛೆಯಂತೆ ನಡೆಸಿಕೊಂಡಿದ್ದಾರೆ. ಬಳಿಕ ಕೊರೊನಾ ಬಂದ ಪರಿಣಾಮ ಮೈಸೂರಿಗೆ 2020ರಲ್ಲಿ ಮತ್ತೆ ಮೈಸೂರಿಗೆ ಹಿಂದುರಿಗಿದ್ದು, ಬಳಿಕ ಸ್ಥಳೀಯವಾಗಿ ಸುತ್ತಾಟ ನಡೆಸುತ್ತಿದ್ದಾರೆ.
ಇಷ್ಟೆಲ್ಲಾ ಟ್ರಿಪ್ ಎಂದ ಕೂಡಲೇ ನಾವೆಲ್ಲಾ ಕಾರಿನಲ್ಲಿ ಅಂದುಕೊಳ್ಳುವುದು ಸರ್ವೆ ಸಾಮಾನ್ಯ. ಆದರೆ ಈ ತಾಯಿ ಮಗ ತಮ್ಮ 20 ವರ್ಷಗಳ ಹಿಂದೆ ತಂದೆ ಕೊಡಿಸಿದ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ಪ್ರಯಾಣ ನಡೆಸುತ್ತಿದ್ದಾರೆ. ಅದನ್ನೇ ತಂದೆ ಎಂದು ತಿಳಿದುಕೊಂಡು. ನಾವು ಮೂರು ಜನ ಒಟ್ಟಿಗೆ ಪ್ರಯಾಣಿಸುತ್ತಿದ್ದೇವೆ ಎಂಬ ಭಾವನೆಯಂತೆ ಸಂಚರಿಸುತ್ತಿದ್ದೇವೆ ಎನ್ನುತ್ತಾರೆ ಕೃಷ್ಣಕುಮಾರ್.
ಐಕಾನ್- ತಾಯಿಯೊಂದಿಗೆ ಸ್ಕೂಟರ್ ಪ್ರಯಾಣ
PublicNext
18/08/2022 08:21 pm