ಕುಂದಾಪುರ: ಸೋಮವಾರ ಸಂಜೆ ಕಾಲುಸಂಕದಲ್ಲಿ ಕಾಲು ಜಾರಿ ಬಿದ್ದು ಕೊಚ್ಚಿ ಹೋಗಿದ್ದ ಎರಡನೇ ತರಗತಿ ವಿದ್ಯಾರ್ಥಿನಿಯ ಮೃತದೇಹವನ್ನು ಬೀಜಮಕ್ಕಿ ಹೊಳೆಯಲ್ಲಿ ಪತ್ತೆ ಹಚ್ಚಿದ ಆಪತ್ಬಾಂಧವ, ಶೌರ್ಯ ತಂಡದ ಸದಸ್ಯ ಮಂಜುನಾಥ ನಾಯ್ಕ ಕೊಡ್ಲಾಡಿ ಬಗ್ಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
48 ಗಂಟೆಗಳ ಬಳಿಕ ಬೀಜಮಕ್ಕಿ ಹೊಳೆಯಲ್ಲಿ ಸನ್ನಿಧಿ ಬಿದ್ದ ಸ್ಥಳದಿಂದ 400 ಮೀಟರ್ ಕೆಳಗೆ ಆಕೆಯ ಮೃತದೇಹವನ್ನು ಪತ್ತೆ ಹಚ್ಚಲಾಗಿದೆ.
ಸೋಮವಾರ ರಾತ್ರಿಯಿಂದ ಬುಧವಾರ ಬೆಳಗ್ಗಿನ ವರೆಗೂ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಶೋಧ ನಡೆಸಿದ್ದರೂ ಪ್ರಯೋಜನವಾಗಿರಲಿಲ್ಲ.
ಇಂದು ಧರ್ಮಸ್ಥಳದ ವಿಪತ್ತು ನಿರ್ವಹಣಾ ವಿಭಾಗ ಶೌರ್ಯ ತಂಡದ ಸಂಚಾಲಕ ರಾಜಶೇಖರ್ ನೇತೃತ್ವದ ಏಳು ಮಂದಿಯ ತಜ್ಞರ ತಂಡ ಶೋಧ ಕಾರ್ಯಕ್ಕೆ ಇಳಿದಿತ್ತು. ಸಂಜೆ ಸುಮಾರು 5 ಗಂಟೆಗೆ ತಂಡದ ಮಂಜುನಾಥ ನಾಯ್ಕ್ ಕೊಡ್ಲಾಡಿ ಅವರು ಸನ್ನಿಧಿಯ ಮೃತದೇಹ ಪತ್ತೆ ಹಚ್ಚಿದ್ದಾರೆ.
ಶೌರ್ಯ ತಂಡದಲ್ಲಿ ಮಂಜುನಾಥ್ ನಾಯಕ್ ಕೊಡ್ಲಾಡಿ, ಉಮೇಶ್ ನಲ್ಲಿಕಟ್ಟೆ, ರಾಜಶೇಖರ್ ಕಾಳಾವರ, ರಾಘವೇಂದ್ರ, ಕೌಶಿಕ್, ಸುಜಿತ್ ಕುಮಾರ್, ಪ್ರಕಾಶ್ ಆಚಾರ್, ಶೇಖರ್ ಕವ್ರಿಕೆರೆ, ಸುನಿಲ್ ಕುಮಾರ್ ಇದ್ದರು.
PublicNext
11/08/2022 09:38 am