ಕಾಪು : ಒಂದೇ ಚಿತೆಯಲ್ಲಿ ಅಂತ್ಯ ಸಂಸ್ಕಾರ ಕ್ರಿಯೆಗಳಿಗೆ ಒಳಗಾದ ಬೆಳಪುವಿನ ದಂಪತಿ ಸಾವಿನ ಘಟನೆಯ ನೆನಪು ಮಾಸುವ ಮುನ್ನವೇ ಅಂತಹುದೇ ಘಟನೆಯೊಂದು ಕುತ್ಯಾರು ಅಂಜಾರುವಿನಲ್ಲಿ ನಡೆದಿದೆ.
ಕುತ್ಯಾರು ಅಂಜಾರು ಮನೆ ಶಾಂತಾ ಆರ್. ಶೆಟ್ಟಿ (85) ಮತ್ತು ಕಿನ್ನಿಗೋಳಿ ಕೊಟ್ರಾಡಿ ರಾಮಣ್ಣ ಶೆಟ್ಟಿ (90) ಮೃತ ದಂಪತಿ. ಮೃತರು ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪ್ರಗತಿಪರ ಕೃಷಿಕರಾಗಿದ್ದ ರಾಮಣ್ಣ ಶೆಟ್ಟಿ ಅವರು ವಯೋಸಹಜ ಕಾರಣಗಳಿಂದಾಗಿ ಅಸೌಖ್ಯಕ್ಕೊಳಗಾಗಿದ್ದು ಅವರ ಮಕ್ಕಳು ಮತ್ತು ಮನೆಯವರು ಮಂಗಳವಾರ ಸಂಜೆ ಕುಟುಂಬದ ಮೂಲಮನೆ ಕಿನ್ನಿಗೋಳಿ ಕೊಟ್ರಾಡಿಗೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು. ಕೊಟ್ರಪಾಡಿಗೆ ಕರೆದೊಯ್ಯಲೆಂದು ಕುತ್ಯಾರು ಅಂಜಾರು ಮನೆಗೆ ಅಂಬುಲೆನ್ಸ್ ತರಿಸಲಾಗಿದ್ದು, ಅಂಬುಲೆನ್ಸ್ ಸೌಂಡ್ ಕೇಳುತ್ತಲೇ ಶಾಂತಾ ಶೆಟ್ಟಿ ಅವರು ಹೃದಯಾಘಾತಕ್ಕೊಳಗಾಗಿದ್ದರು. ಬಳಿಕ ಅದೇ ಅಂಬುಲೆನ್ಸ್ ನಲ್ಲಿ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದರು.
ಮನೆಯವರು ಅವರ ಮೃತದೇಹವನ್ನು ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಿ ಮನೆಗೆ ಬಂದಿದ್ದು, ಬುಧವಾರ ಬೆಳಗ್ಗೆ ಮೃತದೇಹವನ್ನು ಮನೆಗೆ ತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ರಾಮಣ್ಣ ಶೆಟ್ಟಿ ಅವರು ಕೂಡಾ ಅಸು ನೀಗಿದ್ದಾರೆ. ಕುತ್ಯಾರು ಅಂಜಾರು ಮನೆಯಲ್ಲಿ ಇಬ್ಬರ ಮೃತದೇಹವನ್ನು ಒಂದೇ ಚಿತೆಯಲ್ಲಿ ಇರಿಸಿ ಅಂತಿಮ ಸಂಸ್ಕಾರ ನಡೆಸಲಾಗಿದೆ.
PublicNext
10/08/2022 05:12 pm