ಪಬ್ಲಿಕ್ ನೆಕ್ಸ್ಟ್ ಸ್ಪೆಷಲ್ ಸ್ಟೋರಿ
ಮಂಗಳೂರು: ನಾನು ನನ್ನ ಕುಟುಂಬ ಅಂತಾ ಸ್ವಾರ್ಥಜೀವನ ಮಾಡುವ ಈ ಕಾಲಘಟ್ಟದಲ್ಲಿ ಮಂಗಳೂರಿನ ಇಳಿವಯಸ್ಸಿನ ವೃದ್ಧೆ ತಾನು ಭಿಕ್ಷೆ ಬೇಡಿ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿ ಹಣವನ್ನು ದೇವಸ್ಥಾನದ ಅನ್ನದಾನಕ್ಕೆ ನೀಡಿ ಮಾದರಿಯಾಗಿದ್ದಾರೆ.
80ರ ಹರೆಯದ ಇಳಿವಯಸ್ಸಿನ ಅಶ್ವಥಮ್ಮ ಸಮಾಜದಿಂದ ಬಂದ ಹಣವನ್ನು ಸಮಾಜಕ್ಕೇ ನೀಡಿ ಗಮನಸೆಳೆದಿದ್ದಾರೆ.ಕಳೆದ ಹಲವಾರು ವರ್ಷಗಳಿಂದ ಮಂಗಳೂರಿನ ಪುಣ್ಯ ಪ್ರಸಿದ್ಧ ದೇವಸ್ಥಾನ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಮುಂಭಾಗ ಭಿಕ್ಷೆ ಬೇಡುತ್ತಿರುವ 80ರ ಹರೆಯ ಅಶ್ವಥಮ್ಮ ತಾನು ಭಿಕ್ಷೆ ಬೇಡಿ ಬಂದ ಹಣದಲ್ಲಿ ಒಂದು ಲಕ್ಷ ರೂಪಾಯಿ ಯನ್ನು ಪೊಳಲಿ ದೇವಸ್ಥಾನದ ಅನ್ನದಾನಕ್ಕೆ ನೀಡಿದ್ದಾರೆ. ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪದ ಕಂಚಿಗೋಡು ನಿವಾಸಿಯಾಗಿರುವ ಅಶ್ಚಥಮ್ಮರ ಪತಿ 18 ವರ್ಷಗಳ ಹಿಂದೆ ಮೃತರಾಗಿದ್ದಾರೆ.ಇವರ ಮಕ್ಕಳೂ ಇಹಲೋಕ ತ್ಯಜಿಸಿದ್ದಾರೆ. ಧಾರ್ಮಿಕ ಪ್ರಜ್ಞೆ ಹೊಂದಿರುವ ಅಶ್ವಥಮ್ಮ ಆ ಬಳಿಕ ದೇವಸ್ಥಾನದ ಮುಂದೆ ಭಿಕ್ಷಾಟನೆ ಮಾಡಲು ನಿರ್ಧಾರ ಮಾಡಿದ್ದಾರೆ.
ಆದರೆ ಭಿಕ್ಷೆ ಬೇಡಿದ ಹಣವನ್ನು ಎಳ್ಳಷ್ಟೂ ಸ್ವಂತಕ್ಕೆ ಉಪಯೋಗಿಸದ ಅಶ್ವಥಮ್ಮ ಈ ವರೆಗೆ ಆರು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೇವಸ್ಥಾನ ಆಶ್ರಮಗಳಿಗೆ ದೇಣಿಗೆಯಾಗಿ ನೀಡಿದ್ದಾರೆ. ವರ್ಷದ ಬಹುತೇಕ ಸಮಯ ಅಯ್ಯಪ್ಪ ಮಾಲಾಧಾರಿಯಾಗಿಯೇ ಇರುವ ಅಶ್ವಥಮ್ಮ ಅಯ್ಯಪ್ಪನ ಪರಮ ಭಕ್ತೆಯಾಗಿದ್ದಾರೆ. ಶಬರಿಮಲೆಯ ಪಂಪೆ,ಪಂದಳ,ಎರಿಮಲೆಯಲ್ಲೂ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರಿಗೆ ಅನ್ನಪೂರ್ಣೆಯಾಗಿ ಅಶ್ವಥಮ್ಮ ಅನ್ನದಾನವನ್ನು ಮಾಡಿದ್ದಾರೆ.
ಅಶ್ವಥಮ್ಮ ಪೊಳಲಿ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಜಾತ್ರೋತ್ಸವ ಸಂದರ್ಭದಲ್ಲಿ ಸೇರಿದಂತೆ ಕ್ಷೇತ್ರದಲ್ಲಿ ತನಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ಕೂಡಿಟ್ಟು ಅನ್ನದಾನದ ನಿಧಿಗೆ ಸಮರ್ಪಣೆ ಮಾಡಿದ್ದಾರೆ. ಬೆಳಗ್ಗೆ ಯಿಂದ ಸಂಜೆಯವರೆಗೆ ಭಿಕ್ಷೆ ಬೇಡಿ ಸಂಗ್ರಹವಾದ ಹಣವನ್ನು ನಿತ್ಯ ಪಿಗ್ಮಿಗೆ ಕಟ್ಟಿ ಲಕ್ಷ ರೂಪಾಯಿ ಜಮೆಯಾದ ಬಳಿಕ ಆ ಹಣವನ್ನು ಅಶ್ವಥಮ್ಮ ದೇವಸ್ಥಾನದ ಅನ್ನದಾನಕ್ಕೆ ನೀಡುತ್ತಾರೆ. ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಅನ್ನದಾನಕ್ಕೆ ಒಂದು ಲಕ್ಷ ರೂಪಾಯಿ, ಪೊಳಲಿ ಅಖಿಲೇಶ್ವರ ದೇವಸ್ಥಾನದಲ್ಲಿ ಅಯ್ಯಪ್ಪ ವೃತಧಾರಿಗಳಿಗೆ ಒಂದೂವರೆ ಲಕ್ಷ ರೂಪಾಯಿ ದೇಣಿಗೆ,ಗಂಗೊಳ್ಳಿ ದೇವಸ್ಥಾನದಲ್ಲಿ ಅನ್ನ ದಾನ ಸೇರಿದಂತೆ ನಾನಾ ದೇಗುಲ ಹಾಗೂ ಆಶ್ರಮ ಗಳಿಗೆ ಅಶ್ವಥಮ್ಮ ದೇಣಿಗೆ ನೀಡಿದ್ದಾರೆ.
ತನ್ನ ಅನ್ನದಾನದ ಸೇವೆಯ ಬಗ್ಗೆ ಮಾತನಾಡಿದ ಅಶ್ವಥಮ್ಮ,ಸಮಾಜ ನೀಡಿದ ಹಣವನ್ನು ಸಮಾಜಕ್ಕೆ ಅರ್ಪಿಸಿದ್ದೇನೆ.ಈ ವರೆಗೆ ದಾನ ನೀಡಿದ್ದನ್ನು ಲೆಕ್ಕ ಇಟ್ಟಿಲ್ಲ. ದೇವರು ಎಲ್ಲರನ್ನೂ ಚೆನ್ನಾಗಿಡಲಿ. ಹಸಿದ ಹೊಟ್ಟೆಯಲ್ಲಿ ಯಾರೂ ಇರಬಾರದೆಂಬುವುದೇ ನನ್ನ ಉದ್ದೇಶ ಅಂತಾ ಅಶ್ವಥಮ್ಮ ಹೇಳಿದ್ದಾರೆ.
PublicNext
23/04/2022 10:14 pm