ಉಳ್ಳಾಲ: ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನೆನಪಿನಂಗಳದಲ್ಲಿ ಮಂಗಳೂರಿನ ಸಾಯಿ ಪರಿವಾರ್ ಟ್ರಸ್ಟ್ ಹಮ್ಮಿಕೊಂಡಿರುವ ಬೃಹತ್ ನೇತ್ರದಾನ ಅಭಿಯಾನಕ್ಕೆ ಭಾರೀ ಬೆಂಬಲ ವ್ಯಕ್ತವಾಗಿದ್ದು, ಜನರು ಸ್ವಯಂ ಪ್ರೇರಿತರಾಗಿ ನೇತ್ರದಾನಕ್ಕೆ ಮುಂದಾಗಿದ್ದಾರೆ.
ಮಂಗಳೂರು ಹೊರವಲಯದ ತೊಕ್ಕೊಟ್ಟಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಂಸ್ಥೆ ಸಾಯಿ ಪರಿವಾರ್ ಟ್ರಸ್ಟ್ ಪುನೀತ್ ರಾಜ್‌ಕುಮಾರ್ ನೆನಪಿನಂಗಳದಲ್ಲಿ ಕಳೆದ ಎರಡು ತಿಂಗಳ ಹಿಂದೆ ಬೃಹತ್ ನೇತ್ರದಾನ ಅಭಿಯಾನ ಕೈಗೊಂಡಿದ್ದು, ಈಗಾಗಲೇ 500ಕ್ಕೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ನೇತ್ರದಾನಗೈದು ಸಮಾಜಕ್ಕೆ ಮಾದರಿ ಆಗಿದ್ದಾರೆ. ನೇತ್ರದಾನಗೈದ ದಾನಿಗಳಿಗೆ ಸಾಯಿಪರಿವಾರ್ ಟ್ರಸ್ಟ್ ನ ಪ್ರಮಾಣ ಪತ್ರ ನೀಡಲಾಗುತ್ತಿದೆ.
ಇದೇ ಬರುವ ಮೇ.1 ರಂದು ತೊಕ್ಕೊಟ್ಟು,ಅಂಬಿಕಾ ರೋಡ್ ಗಟ್ಟಿ ಸಮಾಜ ಮಂದಿರದಲ್ಲಿ ಬೃಹತ್ ನೇತ್ರದಾನ ಅಭಿಯಾನದ ಸಮಾರೋಪ ಸಮಾರಂಭ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯನ್ನ ಭಾನುವಾರ ಸಾಯಿ ಪರಿವಾರ್ ಟ್ರಸ್ಟ್ ನ ಸೇವಾಲಯ ಹೊಂಬೆಳಕಲ್ಲಿ ಬಿಡುಗಡೆ ಮಾಡಲಾಯಿತು.
ಸಾಯಿ ಪರಿವಾರ್ ಟ್ರಸ್ಟ್ ನ ಗೌರವ ಸಲಹೆಗಾರ ಮಸ್ಕತ್ ನ ಉದ್ಯೋಗಿ ಪ್ರವೀಣ್ ಶೆಟ್ಟಿ ಪಿಲಾರು ಮೇಗಿನಮನೆ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು. ಸಾಯಿ ಪರಿವಾರ್ ಟ್ರಸ್ಟ್ ನ ಪ್ರಮುಖರಾದ ಪ್ರವೀಣ್ ಎಸ್ .ಕುಂಪಲ ,ಮಾತನಾಡಿ ನಟ ಪುನೀತ್ ರಾಜ್ ಅವರ ಸಮಾಜ ಮುಖಿ ಚಿಂತನೆಯ ವ್ಯಕ್ತಿತ್ವವೇ ನಮಗೆ ಸ್ಪೂರ್ತಿಯಾಗಿದೆ.ಪುನೀತ್ ಅವರ ನೆನಪಿನಂಗಳದಲ್ಲಿ ನಡೆಯುತ್ತಿರುವ ನೇತ್ರದಾನ ಅಭಿಯಾನದಲ್ಲಿ ಈಗಾಗಲೇ 500 ಕ್ಕೂ ಹೆಚ್ಚು ಮಂದಿ ಸ್ವಯಂ ಪ್ರೇರಿತರಾಗಿ ನೇತ್ರದಾನ ಮಾಡಿದ್ದಾರೆ.ಸಂಸ್ಥೆಯು 1000 ನೇತ್ರದಾನದ ಗುರಿ ಇಟ್ಟಿದ್ದು ಇದೆ ಮೇ.1 ರಂದು ಅಭಿಯಾನದ ಸಮಾರೋಪ ಕಾರ್ಯ ನಡೆಯಲಿದೆ.ಸಮಾರೋಪ ಸಮಾರಂಭದಲ್ಲಿ ಕರಾವಳಿಯ ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ,ಮತ್ತು ಚಲನ ಚಿತ್ರ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಸೇರಿ ಹಲವಾರು ಗಣ್ಯರು ಭಾಗವಹಿಸಲಿದ್ದಾರೆಂದು ಹೇಳಿದ್ದಾರೆ.
Kshetra Samachara
19/04/2022 10:16 am