ಉಡುಪಿ: ಉಡುಪಿ ಜಿಲ್ಲೆಯ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಪಕ್ಕದಲ್ಲಿ ಸುಧೀಂದ್ರ ಐತಾಳ್ ಎಂಬವರು 35 ವರ್ಷಗಳಿಂದಲೂ ಪ್ರಾಣಿ-ಪಕ್ಷಿಗಳ ರಕ್ಷಣಾ ಕೇಂದ್ರ ನಡೆಸುತ್ತಿದ್ದಾರೆ. ನಾನಾ ಪ್ರಭೇದದ ಪ್ರಾಣಿ-ಪಕ್ಷಿ ಇಲ್ಲಿನ ವಿಶೇಷ ಆಕರ್ಷಣೆ.
ಅಲ್ಲದೆ ನಾಯಿ, ಕೋತಿ, ಹಾವಿಗೆ ಚಿಕಿತ್ಸೆ ನೀಡುತ್ತಾ ಪಾಲನೆಯನ್ನೂ ಮಾಡುತ್ತಿದ್ದಾರೆ. ಈ ಎಲ್ಲಾ ಪ್ರಾಣಿ-ಪಕ್ಷಿಗಳ ಪೋಷಣೆ ಮಾಡಲು ಒಂದು ದಿನಕ್ಕೆ ಸರಾಸರಿ 5000 ರೂ. ವೆಚ್ಚವಾಗುತ್ತದೆ.
ಐತಾಳ್ ರಿಗೆ ಬಾಲ್ಯದಿಂದಲೇ ಪ್ರಾಣಿ- ಪಕ್ಷಿಗಳೆಂದರೆ ಬಲು ಪ್ರೀತಿ. ಬಳಿಕ ಪ್ರಾಣಿ ರಕ್ಷಣಾ ಕೇಂದ್ರವನ್ನೇ ತೆರೆದರು. ಈ ಕಾರ್ಯಕ್ಕೆ ಮನೆಯವರೂ ಬೆನ್ನೆಲುಬಾದರು. ಸನಿಹದ ಊರುಗಳಲ್ಲಿ ಹಾವು ಗಾಯಗೊಂಡರೆ ತಕ್ಷಣ ಧಾವಿಸಿ, ಚಿಕಿತ್ಸೆ ನೀಡಿ ಹಾವನ್ನು ಕಾಡಿಗೆ ಬಿಡುತ್ತಾರೆ.
ಇಲ್ಲಿ ನವಿಲು, ಪಾರಿವಾಳ ಸಹಿತ ಅನೇಕ ವಿದೇಶಿ ತಳಿಗಳಿವೆ. ಇಗ್ವಾನ ಎಂಬ ವಿಶಿಷ್ಟ ಜಾತಿಯ ಪ್ರಾಣಿಯಿದ್ದು, ಉಡದಂತಿದೆ. ದಿನದ 24 ಗಂಟೆಯಲ್ಲಿ ಊಟ ಹೊರತುಪಡಿಸಿ ಮತ್ತೆಲ್ಲ ವೇಳೆಯಲ್ಲೂ ಗೋಡೆ ಮೇಲೆ ಕುಳಿತಿರುತ್ತದೆ. ಗರುಡವೂ ಇದ್ದು ತನ್ನೆರಡೂ ರೆಕ್ಕೆ ಕಳೆದುಕೊಂಡು ಹಾರಲು ಅಸಮರ್ಥವಾಗಿ ಆರೈಕೆ ಮಾಡಲಾಗುತ್ತಿದೆ. ಬಿಳಿ ಇಲಿ, ಬಾತುಕೋಳಿ, ಫ್ರಾನ್ಸ್ ಕೋಳಿಯೂ ಇಲ್ಲಿವೆ.
PublicNext
28/03/2022 12:28 pm