ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕರುಣೆ ತೋರದ ತೆಲಂಗಾಣ ಸರ್ಕಾರ: ಪುತ್ರಶೋಕದಲ್ಲಿ ದಂಪತಿ!

ಕುಂದಾಪುರ : ‍‌ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಗಾಗಿ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಮೃತಪಟ್ಟ ವಿದ್ಯಾರ್ಥಿಗಾಗಿ ಅಲ್ಲಿನ ಸರ್ಕಾರ ಕನಿಷ್ಠ ಸಾಂತ್ವನವನ್ನೂ ಹೇಳದಿರೋದು ದುರಂತ. ಹೊರರಾಜ್ಯದವರು ಎನ್ನುವ ಏಕೈಕ ಕಾರಣಕ್ಕೆ ಮೃತಪಟ್ಟ ಮಗುವಿಗೆ ಅಂತಿಮ ಗೌರವವನ್ನೂ ಸಲ್ಲಿಸದೆ ತೆಲಂಗಾಣ ಸರ್ಕಾರ ಅಮಾನವೀಯತೆ ತೋರಿದೆ.

ಏನಿದು ಪ್ರಕರಣ?

ಸುಮಾರು 21 ವರ್ಷಗಳ ಹಿಂದೆ ತೆಲಂಗಾಣದ ಕಮ್ಮಾಮ್ ಗೆ ಹೊಟ್ಟೆಪಾಡಿಗಾಗಿ ಹೋದವರು, ಕುಂದಾಪುರ ತಾಲೂಕಿನ ಕೆದೂರು ಗ್ರಾಮ ಪಂಚಾಯತ್ ಮಲ್ಯಾಡಿ ಗ್ರಾಮದ ನಿವಾಸಿಗಳಾದ ದಿನಕರ ಶೆಟ್ಟಿ ಮತ್ತು ಶೀಲಾ ಶೆಟ್ಟಿ ದಂಪತಿ. ಈ ವರ್ಷ ಜನವರಿ 18 ರಂದು ತೆಲಂಗಾಣದ ಕಮ್ಮಾಮ್ ನಲ್ಲಿ ನಡೆದ ಅವಘಡವೊಂದರಲ್ಲಿ ಆಟವಾಡುತ್ತಿದ್ದ ಇವರ ಪುತ್ರ ದಿಗಂತ್ ಶೆಟ್ಟಿ ಮೃತಪಟ್ಟಿದ್ದಾನೆ. ಆದರೆ ಇದುವರೆಗೂ ತೆಲಂಗಾಣ ಸರ್ಕಾರ ಸಹಾಯ ಹಸ್ತ ಚಾಚುವುದು ಬಿಡಿ, ಕನಿಷ್ಠ ಸಾಂತ್ವನ ಹೇಳುವ ಸೌಜನ್ಯವನ್ನೂ ತೋರಿಲ್ಲ.

ಕಮ್ಮಾಮ್ ನಲ್ಲಿ ನೆಲೆಯಾಗಿರುವ ಇವರು ಉಡುಪಿ ಮೂಲದ ಹೋಟೇಲ್ ಉದ್ಯಮಿ ರಾಘವೇಂದ್ರ ರಾವ್ ಅವರ ಹೋಟೇಲ್ ನಲ್ಲಿ ಕ್ಯಾಶಿಯರ್ ಆಗಿ ಕೆಲಸಕ್ಕಿದ್ದರು. ದಂಪತಿ ಮಗ ದಿಗಂತ್ ಶೆಟ್ಟಿ ಕಮ್ಮಾಮ್ ನಲ್ಲಿರುವ ಸ್ಥಳೀಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕೋವಿಡ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಶಾಲೆಗೆ ರಜೆ ಇದ್ದ ಕಾರಣ ಮನೆಯ ಪಕ್ಕದ ಜಾಗದಲ್ಲಿ ಆಟವಾಡುತ್ತಿದ್ದಾಗ, ಮೈದಾನದ ಪಕ್ಕದ ಕಾಂಪೌಂಡ್ ಗೋಡೆ ಜೊತೆಗೆ ಮರ ಉರುಳಿ ಬಿದ್ದು ದಿಗಂತ್ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಒಟ್ಟು ಮೂವರು ಮಕ್ಕಳ ಮೇಲೆ ಮರ ಉರುಳಿ ಬಿದ್ದಿದ್ದು, ಇಬ್ಬರು ಮಕ್ಕಳು ಮೃತಪಟ್ಟಿದ್ದರು. ಅದರಲ್ಲಿ ಕರ್ನಾಟಕದ ದಿಗಂತ್ ಕೂಡ ಒಬ್ಬ.

ಒಟ್ಟಾರೆ ಮಾಡದ ತಪ್ಪಿಗೆ ಬಾಳಿ ಬದುಕಬೇಕಾದ ಹುಡುಗ ತಂದೆತಾಯಿಯನ್ನು ಅಗಲಿದ್ದಾನೆ. ಆದರೆ ಈತನಕ ಕನಿಷ್ಠ ಸಾಂತ್ವನವನ್ನೂ ಹೇಳದೆ,ಕಿಂಚಿತ್ ಸಹಾಯವನ್ನೂ‌ ಮಾಡದೆ ತೆಲಂಗಾಣ ಸರ್ಕಾರ ಮೌನ ವಹಿಸಿದೆ. ಇತ್ತ ದಂಪತಿ ಪುತ್ರಶೋಕದಲ್ಲಿ ಮುಳುಗಿದ್ದಾರೆ.

-ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ

Edited By : Shivu K
PublicNext

PublicNext

23/03/2022 12:01 pm

Cinque Terre

43.51 K

Cinque Terre

2

ಸಂಬಂಧಿತ ಸುದ್ದಿ