ಮಂಗಳೂರು: ತುಳುಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ, ರಾಜ್ಯದ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವ ಕೂಗು ಹೆಚ್ಚಾಗುತ್ತಿರುವಂತೆ ತುಳುಲಿಪಿಯ ನಾಮ ಫಲಕಗಳು ಎಲ್ಲೆಡೆ ರಾರಾಜಿಸಲಾರಂಭಿಸುತ್ತಿದೆ. ಇದೀಗ ಮಂಗಳೂರಿನ ಸುಪ್ರಸಿದ್ಧ ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ತುಳುಲಿಪಿಯ ನಾಮಫಲಕವನ್ನು ಶಾಸಕ ವೇದವ್ಯಾಸ್ ಕಾಮತ್ ಉಪಸ್ಥಿತಿಯಲ್ಲಿ ಪುಟ್ಟ ಬಾಲಕಿ ಅನಾವರಣಗೊಳಿಸಿದಳು.
ಈ ವೇಳೆ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಕೆಲವು ದಿನಗಳ ಹಿಂದೆ ತುಳು ಸಂಘಟನೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಆಗ ಶಿಶ್ಮಿತ ಎಂಬ ಪುಟ್ಟ ಬಾಲಕಿ ಮಂಗಳಾದೇವಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ತುಳು ಲಿಪಿಯ ನಾಮಫಲಕ ಅಳವಡಿಸುವಂತೆ ಸ್ವತಃ ತಾನೇ ತುಳು ಲಿಪಿಯಲ್ಲಿ ಮನವಿ ಮಾಡಿದ್ದಳು. ಆಕೆಯ ಕೋರಿಕೆಯಂತೆ ಮಂಗಳಾದೇವಿ ದೇವಸ್ಥಾನ ರಸ್ತೆಗೆ 'ತುಳುವೆರ್ ಕುಡ್ಲ' ಸಂಘಟನೆಯ ಸಹಯೋಗದೊಂದಿಗೆ ನಾಮಫಲಕ ಅಳವಡಿಸಿ ಇಂದು ಶಿಶ್ಮಿತಾ ಹಸ್ತದಿಂದಲೇ ಅನಾವರಣಗೊಳಿಸಿದ್ದೇವೆ ಎಂದರು.
ತುಳು ಭಾಷೆಗೆ ಅಧಿಕೃತ ರಾಜ್ಯಭಾಷೆಯ ಮಾನ್ಯತೆ ನೀಡುವ ಕುರಿತು ಈಗಾಗಲೇ ಪ್ರಯತ್ನಗಳು ನಡೆಯುತ್ತಿವೆ. ಹಾಗೆಯೇ ತುಳು ಲಿಪಿಯ ಕುರಿತು ಸಾಕಷ್ಟು ಪ್ರಮಾಣದಲ್ಲಿ ಪ್ರಚಾರ ನೀಡುವ ಅವಶ್ಯಕತೆ ಇರುವ ಕಾರಣ ಇಂತಹ ಕಾರ್ಯಗಳಿಗೆ ಪ್ರೋತ್ಸಾಹ ನೀಡುತಿದ್ದೇವೆ. ತುಳುಲಿಪಿಯ ಬಳಕೆ ಹೆಚ್ಚಾದಂತೆ ಭಾಷೆಯ ಉಳಿವಿಗೆ ಹೆಚ್ಚಿನ ಮಹತ್ವ ನೀಡಿದಂತಾಗುತ್ತದೆ ಎಂದು ಹೇಳಿದರು.
Kshetra Samachara
22/03/2022 01:29 pm