ಉಪ್ಪಿನಂಗಡಿ: ಮುಸ್ಲಿಂ ವ್ಯಕ್ತಿಯೋರ್ವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ಸಂದರ್ಭ ಅಲ್ಲೇ ಬ್ಯಾಂಡ್- ವಾದ್ಯದೊಂದಿಗೆ ಮೆರವಣಿಗೆ ಹೋಗುತ್ತಿದ್ದ ಹಿಂದೂ ಸಹೋದರರು ತಮ್ಮ ಬ್ಯಾಂಡ್- ವಾದ್ಯ ಕೆಲಹೊತ್ತು ಬಂದ್ ಮಾಡಿ ಅಂತಿಮ ಯಾತ್ರೆಗೆ ಗೌರವ ಸೂಚಿಸಿ ಸೌಹಾರ್ದತೆ ಮೆರೆದಿರೋದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಗಳಿಸಿದೆ.
ಉಪ್ಪಿನಂಗಡಿಯ ಮುಸ್ಲಿಂ ಉದ್ಯಮಿಯೊಬ್ಬರು ನಿಧನರಾಗಿದ್ದು, ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯೂ ಮಸೀದಿ ಕಡೆಗೆ ಸಾಗುತ್ತಿತು. ಎದುರುಗಡೆಯಿಂದ ಶ್ರೀ ವೆಂಕಟ್ರಮಣ ದೇವಸ್ಥಾನದ ರಥೋತ್ಸವ ಹಿನ್ನೆಲೆಯಲ್ಲಿ ಇದೇ ರಸ್ತೆಯಲ್ಲಿ ಬ್ಯಾಂಡ್- ವಾದ್ಯಗಳೊಂದಿಗೆ ಹಿಂದೂ ಬಾಂಧವರು ಉತ್ಸವ ಸಂಭ್ರಮದಲ್ಲಿ ಬರುತ್ತಿದ್ದರು.
ಎದುರುಗಡೆ ಪಾರ್ಥಿವ ಶರೀರದ ಅಂತಿಮ ಯಾತ್ರೆ ಗಮನಿಸಿದ ಹಿಂದೂ ಸಹೋದರರು ತಕ್ಷಣ ತಮ್ಮ ಬ್ಯಾಂಡ್- ವಾದ್ಯ, ನೃತ್ಯ ನಿಲ್ಲಿಸಿ ಬದಿಗೆ ಸರಿದು ಮುಸ್ಲಿಂ ಬಾಂಧವರಿಗೆ ದಾರಿ ಮಾಡಿ ಕೊಟ್ಟರು. ಅಲ್ಲೇ ಬದಿಯಲ್ಲಿದ್ದ ಕೆಲವರು ಈ ದೃಶ್ಯಾವಳಿ ಚಿತ್ರೀಕರಿಸಿದ್ದು, ʼನಾವೆಲ್ಲರೂ ಒಂದೇʼ ಎನ್ನುವ ಸೌಹಾರ್ದತೆ ಭಾವನೆಯ ಈ ವೀಡಿಯೊ ವೈರಲ್ ಆಗಿದ್ದು, ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ.
PublicNext
14/02/2022 05:03 pm