ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ತೆಂಗಿನ ಗೆರಟೆ ಅರಳಿ....ಹೂವಾಗಿ....ಉಡುಪಿಯಲ್ಲೊಬ್ಬ ವಿಶಿಷ್ಟ ಕಲಾವಿದ!

ವಿಶೇಷ ವರದಿ: ರಹೀಂ ಉಜಿರೆ

ಅಲೆವೂರು: ಕಲೆಗೆ ಸಾವಿರ ಮಾಧ್ಯಮ..ಉಡುಪಿಯ ಭಟ್ಟರ ಕೈಯಲ್ಲಿ ತೆಂಗಿನ ಗೆರಟೆಯೂ ಹೂವಾಗಿ ಅರಳುತ್ತೆ! ಹೌದು..ತೆಂಗಿನ ಗೆರಟೆ ಕಲಾವಿದ ಎಂದೇ ಕರೆಸಿಕೊಳ್ಳುವ ಇವರು ಎಲೆಮರೆಯ ಕಾಯಿಯಂತಿರುವ ಪ್ರತಿಭೆ.ತಮ್ಮ ಪಾಡಿಗೆ ಗೆರಟೆಗೆ ವೈವಿಧ್ಯಮಯ ರೂಪ ಕೊಡುವ ಇವರು ವಿಶಿಷ್ಟ ಪ್ರತಿಭೆಯ ಕಲಾವಿದ.

ವಾಯ್ಸ್ : ಕಲಾವಿದ ವೆಂಕಟರಮಣ ಭಟ್ ಕೈಗೆ ಒಂದು ತೆಂಗಿನ ಗೆರಟೆ ಕೊಟ್ಟರೆ ಸಾಕು.. ಕ್ಷಣಾರ್ಧದಲ್ಲಿ ಅದು ಒಂದು ಅದ್ಭುತ ಕಲಾಕೃತಿಯಾಗಿ ರೂಪುಗೊಳ್ಳುತ್ತದೆ.ನಾವೆಲ್ಲ ಒಲೆ ಉರಿಸಲು ಉಪಯೋಗಿಸಿವ ಅಥವಾ ಬಿಸಾಡುವ ಈ ಗೆರಟೆಯನ್ನೇ ಬಳಸಿ ಇವರು ನೂರಾರು ಕಲಾಕೃತಿ ರಚಿಸಿದ್ದಾರೆ.ಇವರ ಕಲಾಕೃತಿಗಳು ನೂರಾರು ಮನೆಗಳ ಶೋಕೇಸ್ ಸೇರಿ ಮನೆಯ ಅಂದ ಹೆಚ್ಚಿಸಿವೆ.

ತೆಂಗಿನ ಗೆರಟೆಯಿಂದ ನಾನಾ ಕಲಾಕೃತಿಗಳನ್ನು ರಚಿಸುವ ಇವರಿಗೆ ಚಿಪ್ಪಿನ ಭಟ್ಟರು ಎಂಬ ಅಡ್ಡ ಹೆಸರು ಕೂಡ ಇದೆ.ಉಡುಪಿಯ ಅಲೆವೂರು ನಿವಾಸಿಯಾಗಿರುವ ಇವರಿಗೆ ಈಗ ವಯಸ್ಸು 73. ಆದರೆ ಕಲೆಯ ಬಗ್ಗೆ ಇವರಿಗೆ ಇರುವ ಆಸಕ್ತಿ ಎಳ್ಳಷ್ಟೂ ಕುಂದಿಲ್ಲ.

ನೂರಕ್ಕೂ ಅಧಿಕ ಆರ್ಟ್ ಗ್ಯಾಲರಿಗಳಲ್ಲಿ ವೆಂಕಟರಮಣ ಭಟ್ಟರು ಸೃಷ್ಟಿಸಿದ ಕಲಾಕೃತಿಗಳು ಸಾರ್ವಜನಿಕರ ಮನಸೂರೆಗೊಳ್ಳುತ್ತಿವೆ.

ಗೆರಟೆಯನ್ನು ತನಗೆ ಬೇಕಾದ ಆಕೃತಿಗೆ ಕತ್ತರಿಸಿ ,ಅದನ್ನು ಅಂಟಿಸಿ ಒಂದಕ್ಕೆ ಒಪ್ಪುವಂತೆ ಬಣ್ಣ ಬಳಿಯುವ ಭಟ್ಟರ ಚಾಕಚಕ್ಯತೆ ಮತ್ತು ತಾಳ್ಮೆ ಸಾಟಿ ಇಲ್ಲದ್ದು. ಭಟ್ಟರು ಕಂಡುಕೊಂಡಿರುವ ಈ ಕಲಾಪ್ರಕಾರ, ಕಾಲೇಜು ವಿದ್ಯಾರ್ಥಿಗಳನ್ನೂ ಆಕರ್ಷಿಸಿದೆ. ಇವರು ಶಾಲೆ ಕಾಲೇಜುಗಳಿಗೆ ತೆರಳಿ ಮಕ್ಕಳಿಗೂ ಈ ಕಲಾಕೃತಿ ರಚಿಸುವ ಬಗ್ಗೆ ಕಾರ್ಯಾಗಾರ ನಡೆಸುತ್ತಾರೆ.

ಇವರು ರಚಿಸಿದ ಬೃಹತ್ ಗಾತ್ರದ ಗಣೇಶನ ವಿಗ್ರಹಗಳು ಉಡುಪಿಯ ಹಲವೆಡೆ ಕಾಣಸಿಗುತ್ತವೆ.ಬಹುಬೇಡಿಕೆಯ ಕಲಾವಿದರಾಗಿರುವ ಇವರು ತಮ್ಮ ಬಿಡುವಿನ ವೇಳೆಯಲ್ಲಿ ಕಲಾಕೃತಿ ರಚನೆ ಮಾಡುವುದನ್ನು ಈಗಲೂ ಮುಂದುವರಿಸಿದ್ದಾರೆ. ಒಟ್ಟಿನಲ್ಲಿ ಈ ಪ್ರಾಯದಲ್ಲೂ ವೆಂಕಟರಮಣ ಭಟ್ಟರ ಕಲಾ ಪ್ರೀತಿ ಯುವ ಕಲಾವಿದರಿಗೊಂದು ಸ್ಪೂರ್ತಿ.

Edited By : Manjunath H D
PublicNext

PublicNext

22/01/2022 09:11 pm

Cinque Terre

43.61 K

Cinque Terre

4