ಕುಂದಾಪುರ: ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮಾಲೀಕ, ಯುವ ಉದ್ಯಮಿ ಗೋವಿಂದ ಬಾಬು ಪೂಜಾರಿ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಸಮೀಪ ಹೊಸಾಡು ಗ್ರಾಮದ ಕೊಪ್ಪರಿಗೆ ವಾರ್ಡ್ ನಿವಾಸಿ, ಬಡ ಮಹಿಳೆ ಸುಶೀಲಾ ಪೂಜಾರ್ತಿ ಅವರಿಗೆ ಇಂದು ನೂತನ ಮನೆ ಹಸ್ತಾಂತರಿಸಿದರು.
ಸುಶೀಲಾ ಅವರ ಗಂಡ ಕೆಲ ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಗಂಡನ ಮನೆ ಹಾಗೂ ತವರು ಮನೆಯಿಂದ ಕಾರಣಾಂತರದಿಂದ ದೂರವಾದ ಅವರು ಮಗುವಿನೊಂದಿಗೆ ಶಿಥಿಲಾವಸ್ಥೆಯ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಮಹಿಳೆಯ ದಾರುಣ ಬದುಕು,
ಅಸಹಾಯಕತೆ ಅರಿತ ಸ್ಥಳೀಯರಾದ ಮುಳ್ಳಿಕಟ್ಟೆ ಪ್ರದೀಪ್ ಬಿಲ್ಲವ ಅವರು, ಡಾ.ಗೋವಿಂದ ಬಾಬು ಪೂಜಾರಿಯವರ ಗಮನಕ್ಕೆ ಈ ವಿಷಯ ತಂದಾಗ ಡಾ.ಗೋವಿಂದ ಬಾಬು ಪೂಜಾರಿಯವರು ಸ್ಥಳಕ್ಕೆ ಭೇಟಿ ಕೊಟ್ಟು, ಮಹಿಳೆಯ ಸ್ಥಿತಿಗತಿ ಅರಿತು, ಬಳಿಕ ಆಕೆಗೊಂದು ಸುಸಜ್ಜಿತ, ಸುಂದರ ಮನೆ ನಿರ್ಮಿಸಿಯೇ ಬಿಟ್ಟರು!
ಇಂದು ಬೆಳಿಗ್ಗೆ "ಶ್ರೀ ವರಲಕ್ಷ್ಮಿ ನಿಲಯ"ದ ಗೃಹಪ್ರವೇಶ ನೆರವೇರಿಸಿ ಮನೆ ಕೀಯನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಕನ್ಯಾಡಿ ಶ್ರೀ ರಾಮಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಗೃಹಪ್ರವೇಶ ನೆರವೇರಿಸಿ, ಆಶೀರ್ವದಿಸಿದರು. ಬಳಿಕ ಡಾ. ಗೋವಿಂದ ಬಾಬು ಪೂಜಾರಿ ದಂಪತಿಯನ್ನು ಮುಳ್ಳಿಕಟ್ಟೆ ʼಅಂಬಾ ಫ್ರೆಂಡ್ಸ್ʼ ವತಿಯಿಂದ ಸನ್ಮಾನಿಸಲಾಯಿತು. ಇದು ಈ ಕೊಡುಗೈ ದಾನಿ ಬಡವರಿಗೆ ನಿರ್ಮಿಸಿ ಕೊಟ್ಟ 6ನೇ ಮನೆಯಾಗಿದೆ.
Kshetra Samachara
07/01/2022 10:04 pm