ವರದಿ: ರಹೀಂ ಉಜಿರೆ
ಕುಂದಾಪುರ: ತಲೆ ಕೂದಲು ಉದುರುವುದು ಶುರು ಆದರೆ ಸಾಕು, ನಾವು ತಲೆ ಕೆಡಿಸಿಕೊಂಡು ಔಷಧಿ ಮೊರೆ ಹೋಗುತ್ತೇವೆ. ಆದರೆ, ಉದ್ದ ಕೂದಲು ಬಿಟ್ಟು, ವರ್ಷದಿಂದ ಡೆಪರೆಂಟ್ ಹೇರ್ ಸ್ಟೈಲ್ ಮಾಡಿಕೊಂಡಿದ್ದ ಯುವಕನೊಬ್ಬ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಕೇಶ ದಾನ ಮಾಡಿ ಮಕ್ಕಳ ನೋವಿಗೆ ಸಾಂತ್ವನ ಹೇಳಿದ್ದಾರೆ!
ಉಡುಪಿ ಜಿಲ್ಲೆ ಕುಂದಾಪುರದ ಅನಿಕೇತ್ ಶೆಣೈ ಇಂಜಿನಿಯರಿಂಗ್ ವಿದ್ಯಾರ್ಥಿ. ಜೊತೆಗೆ ಸಮಾಜ ಸೇವೆ ಮಾಡುವುದು ಅಂದ್ರೆ ಬಲು ಇಷ್ಟ. 110 ವಾರಗಳಿಗಿಂತಲೂ ಹೆಚ್ಚು ಕಾಲ ಕೋಡಿ ಬೀಚ್ ಸ್ವಚ್ಛತೆ ಮಾಡಿದ ಹೆಗ್ಗಳಿಕೆ ಇವರದ್ದು. ಕೊರೊನಾ ದಾಳಿಗೆ ಮುನ್ನ ಉದ್ದ ಕೂದಲು ಬಿಟ್ಟಿದ್ದರಂತೆ. ಈ ಸಂದರ್ಭ ಕ್ಯಾನ್ಸರ್ ಪೀಡಿತ ಮಕ್ಕಳಿಗೆ ವಿಗ್ ತಯಾರಿಸಲು ತಲೆ ಕೂದಲ ಕೊರತೆ ಇರುವುದು ಅನಿಕೇತ್ ಗಮನಕ್ಕೆ ಬಂತು. ಕಿಮೋಥೆರಪಿ ಆದಾಗ ಕೂದಲು ಉದುರುತ್ತದೆ. ಇದಾಗಿ ಶಾಲೆಗೆ ಹೋದಾಗ, ಅದರಲ್ಲೂ ಕಿಮೋಥೆರಪಿಗೆ ಒಳಗಾದ ಬಾಲಕಿಯರು ಶಾಲೆಗೆ ಬಂದಾಗ ಕುಹಕಕ್ಕೆ ಒಳಗಾಗುತ್ತಾರೆ. ಇದರಿಂದ ಖಿನ್ನತೆಗೆ ಜಾರಿ, ಶಾಲೆ ತಪ್ಪಿಸುವ ಪ್ರಸಂಗ ಕೂಡ ಬರುತ್ತದೆ ಎಂದು ಅನಿಕೇತ್ ಅರಿವಿಗೆ ಬಂತು.
ಹೀಗಾಗಿ ಅನಿಕೇತ್ ತಲೆಕೂದಲನ್ನು ದಾನ ಮಾಡುವ ನಿರ್ಧಾರಕ್ಕೆ ಬಂದರು. ಒಂದೂವರೆ ವರ್ಷದಿಂದ ಬಿಟ್ಟ ಕೂದಲು ನಿರ್ದಿಷ್ಟ ಅಳತೆಗೆ ಬಂದ ಬಳಿಕ ದಾನ ಮಾಡಿ ಕ್ಯಾನ್ಸರ್ ಪೀಡಿತ ಮಕ್ಕಳ ಮೊಗದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.
ಅಂದಹಾಗೆ, ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಯುವತಿಯರು ಕೇಶದಾನ ಮಾಡುವುದು ಕೇಳಿದ್ದೇವೆ, ನೋಡಿದ್ದೇವೆ. ಆದರೆ, ಯುವಕರು ಉದ್ದ ಕೂದಲು ಬಿಡದ ಕಾರಣ ಕೇಶದಾನ ಮಾಡುವುದಕ್ಕೆ ಸಾಧ್ಯವಾಗಲ್ಲ. ಆದರೂ ಅನಿಕೇತ್ ಕ್ಯಾನ್ಸರ್ ಪೀಡಿತ ಮಕ್ಕಳ ಮೇಲಿನ ಅನುಕಂಪದಿಂದ ಉದ್ದ ಕೂದಲು ಬಿಟ್ಟು ಕೇಶ ದಾನ ಮಾಡಿದ್ದು ಶ್ಲಾಘನೀಯ.
Kshetra Samachara
19/11/2021 02:04 pm