ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ : ಯಕ್ಷಗಾನ ಕಲಾವಿದನ ಬದುಕಿಗೆ ಬೆಳಕಾದ ವಿದ್ಯಾಪೋಷಕ್ !

ವರದಿ: ರಹೀಂ ಉಜಿರೆ

ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಸೈಡ್ ಎಫೆಕ್ಟ್ ಗಳು ಹಲವು.ಈ ಮಾರಕ ಕಾಯಿಲೆ ಕಲಾವಿದರಿಗೆ ಕೊಟ್ಟ ಹೊಡೆತ ಅಷ್ಟಿಷ್ಟಲ್ಲ. ಪ್ರದರ್ಶನಗಳು ನಿಂತ ಬಳಿಕ ಸಂಪಾದನೆಗೆ ಬೇರೆ ಮಾರ್ಗವಿಲ್ಲದೆ ಅನೇಕ ಕಲಾವಿದರು ಬೀದಿಗೆ ಬರುವಂತಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಕಲಾವಿದರೊಬ್ಬರ ಬದುಕಿಗೆ ಉಡುಪಿಯ ಸಂಸ್ಥೆಯೊಂದು ನೆರವಿಗೆ ಬಂದಿದೆ....

ಚಂದ್ರ ನಾಯ್ಕ, ಅವರೊಬ್ಬ ಅಪರೂಪದ ಕಲಾವಿದ, 35 ವರ್ಷಗಳ ಕಾಲ ಯಕ್ಷರಂಗದಲ್ಲಿ ಹಾಸ್ಯಗಾರರಾಗಿ ಲಕ್ಷಾಂತರ ಜನರನ್ನು ರಂಜಿಸಿದವರು. ಮೂರು ಹೊತ್ತು ಊಟದ ಆಸೆಗಾಗಿ ಮಂದಾರ್ತಿ, ಸಾಲಿಗ್ರಾಮ ಸೇರಿದಂತೆ ಹಲವು ಮೇಳಗಳಲ್ಲಿ ದುಡಿದವರು. ಮೂರೂವರೆ ದಶಕಗಳ ಸೇವೆ ಸಲ್ಲಿಸಿದ ನಂತರ, ಸ್ವಂತಕ್ಕೊಂದು ಮನೆ ಕಟ್ಟಿಸಿಕೊಳ್ಳಬೇಕು ಎಂಬ ಆಸೆಯಾಗಿತ್ತು. ತಕ್ಕಮಟ್ಟಿಗೆ ಚೆನ್ನಾಗಿರುವ ಆರ್ ಸಿಸಿ ಮನೆಯೊಂದರ ನಿರ್ಮಾಣಕ್ಕೆ ಕೈಹಾಕಿದರು. ಅಷ್ಟರಲ್ಲಿ ಕೊರೋನಾ ಮಹಾಮಾರಿಯಂತೆ ಅಪ್ಪಳಿಸಿತು. ಕಲಾವಿದರ ಬದುಕು ಅಕ್ಷರಶಃ ನರಕವಾಗಿ ಬಿಟ್ಟಿತ್ತು. ಈ ಹಿರಿಯ ಕಲಾವಿದ ಚಂದ್ರ ನಾಯಕರ ಬದುಕು ಕೂಡ ಅದಕ್ಕಿಂತ ಹೊರತಾಗಿರಲಿಲ್ಲ. ಕಟ್ಟಿಸಲು ಹೊರಟಿದ್ದ ಕನಸಿನಮನೆ ಅರ್ಧಕ್ಕೇ ನಿಂತಿತು. ದಿಕ್ಕೇ ತೋಚದಂತಾಗಿ ಈ ಕಲಾವಿದ ಸಾಲದಲ್ಲಿ ಮುಳುಗಿಹೋದರು. ಇವರ ಮಗಳು ಗೀತಾ ಕಲಿಕೆಯಲ್ಲಿ ಬಹಳ ಮುಂದಿದ್ದರು. ಹಾಗಾಗಿ ಉಡುಪಿಯ ವಿದ್ಯಾಪೋಷಕ್ ನಿಂದ ಶಿಕ್ಷಣಕ್ಕೆ ನೆರವು ಪಡೆಯುತ್ತಿದ್ದರು. ಯಕ್ಷಗಾನ ಮತ್ತು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವ ಉಡುಪಿಯ ಯಕ್ಷಗಾನ ಕಲಾರಂಗ ಈ ಕಲಾವಿದ ಮತ್ತು ವಿದ್ಯಾರ್ಥಿನಿಯ ಸಂಕಟವನ್ನು ಅರ್ಥ ಮಾಡಿಕೊಂಡಿತು. ಅರ್ಧಕ್ಕೆ ಕೈ ಬಿಟ್ಟ ಮನೆಗೆ ಮರುಜೀವ ನೀಡಲು ನೆರವಿನ ಹಸ್ತ ಚಾಚಿತು. ದಾನಿಗಳ ನೆರವು ಪಡೆದು ತಿಂಗಳುಗಳ ಪರಿಶ್ರಮದಿಂದ ಕಲಾವಿದ ಚಂದ್ರ ನಾಯಕರ ಕನಸಿನ ಮನೆ ಇದೀಗ ಪೂರ್ಣಗೊಂಡಿದೆ.

ಯಕ್ಷಗಾನ ಕಲಾರಂಗ ಕಷ್ಟದಲ್ಲಿರುವ ಕಲಾವಿದರ ಸಹಕಾರಕ್ಕೆ ಯಾವತ್ತೂ ನೇತೃತ್ವ ವಹಿಸಿದೆ. ಈವರೆಗೆ ಸುಮಾರು 21 ಮನೆಗಳನ್ನು ಬಡ ವಿದ್ಯಾರ್ಥಿಗಳು ಹಾಗೂ ಕಲಾವಿದರಿಗೆ ಕಟ್ಟಿಸಿ ಕೊಟ್ಟಿದೆ. ಕೇವಲ ಮನೆ ಕಟ್ಟಿಸಿ ಕೊಡುವುದು ಮಾತ್ರವಲ್ಲ, ಸಾವಿರಾರು ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗಿದೆ. ವಿದ್ಯುತ್ ಇಲ್ಲದ ಮನೆಗೆ ವಿದ್ಯುತ್ ಸಂಪರ್ಕ, ಅಪಘಾತವಾದರೆ ವಿಮೆ, ಕಲಾವಿದರ ಸಾವು ಸಂಭವಿಸಿದರೆ ಆರ್ಥಿಕ ನೆರವು... ಹೀಗೆ ಕಲಾವಿದರ ಸರ್ವತೋಮುಖ ಅಭಿವೃದ್ಧಿಗೆ ಪಣ ತೊಟ್ಟಿದೆ.ಸಾಮಾಜಿಕ ಸಂಸ್ಥೆಗಳ ಸಾರ್ಥಕತೆ ಇರುವುದು ಇಂತಹ ಮಾನವೀಯ ಕಾರ್ಯ ಮಾಡುವುದರಲ್ಲಿ,ಅಲ್ಲವೆ?

Edited By : Shivu K
Kshetra Samachara

Kshetra Samachara

05/10/2021 11:40 am

Cinque Terre

10.66 K

Cinque Terre

0

ಸಂಬಂಧಿತ ಸುದ್ದಿ