ವರದಿ: ರಹೀಂ ಉಜಿರೆ
ಕುಂದಾಪುರ: ಯಾರದೋ ಪಿತೂರಿಯಿಂದ , ಸೌದಿಯಲ್ಲಿ ಬರೋಬ್ಬರಿ 20 ತಿಂಗಳು ಜೈಲುವಾಸ ಅನುಭವಿಸಿದವರು ಹರೀಶ್ ಬಂಗೇರಾ.ಅವರು ಅಲ್ಲಿಂದ ಬಿಡುಗಡೆಯಾಗಿ ನಿನ್ನೆ ತವರಿಗೆ ವಾಪಾಸಾಗಿದ್ದಾರೆ.ಆದರೆ ಮಾಡದ ತಪ್ಪಿಗಾಗಿ ಅನುಭವಿಸಿದ ಜೈಲುವಾಸ ನ್ಯಾಯವೇ? ಬಂಗೇರಾ ಹೆಸರಿನ ಫೇಕ್ ಅಕೌಂಟ್ ಮಾಡಿ ಅರಬ್ ಶೇಖರ ಮತ್ತು ಮೆಕ್ಕಾದ ಅವಹೇಳನ ಮಾಡಿದ ಮೂಡುಬಿದರೆಯ ಅಸಲಿ ಅಪರಾಧಿಗಳಿಗೆ ಯಾವ ಶಿಕ್ಷೆ?
ಕುಂದಾಪುರ ತಾಲೂಕಿನ ಬೀಜಾಡಿಯ ಎಸಿ ಮೆಕ್ಯಾನಿಕ್ ಹರೀಶ್ ಬಂಗೇರಾಗೆ ಸೌದಿಯಲ್ಲಿ ಕೆಲಸ ಸಿಕ್ಕಿದಾಗ ಹರೀಶ್ ಸುಮನಾ ದಂಪತಿ ರಂಗಿನ ಕನಸು ಕಂಡಿದ್ದರು.ಗಂಡನನ್ನು ಸೌದಿಗೆ ಬೀಳ್ಕೊಟ್ಟ ಪತ್ನಿ ಸುಮನಾ ,ಮಗಳ ಜೊತೆ ಊರಲ್ಲೇ ಕನಸು ಹೆಣೆಯುತ್ತಿದ್ದರು.ಆದರೆ ವಿಧಿಯ ಆಟವೇ ಬೇರೆ ಇತ್ತು.ಯಾರೋ ಮಾಡಿದ ತಪ್ಪಿಗಾಗಿ ಗಂಡ ಸೌದಿಯ ಸೆರೆಮನೆ ಪಾಲಾಗಿದ್ದರು! ಮೂಡುಬಿದ್ರೆಯ ಅಬ್ದುಲ್ ಹುಯೇಝ್ ಮತ್ತು ಅಬ್ದುಲ್ ತುಯೇಝ್ ಎಂಬ ಸಹೋದರರಿಬ್ಬರು ಮಾಡಿದ ಚಿತಾವಣಿಯಿಂದಾಗಿ ಹರೀಶ್ ಜೈಲುಪಾಲಾಗಿದ್ದರು.ಇತ್ತ ಮನೆಯಲ್ಲಿ ಪತ್ನಿ ಮತ್ತು ಮಗಳಿಗೆ ಸಿಡಿಲೆರಗಿದಂತಹ ಆಘಾತ...ಆದರೆ ನನ್ನ ಗಂಡನನ್ನು 20 ತಿಂಗಳು ಜೈಲುವಾಸ ಆಗುವಂತೆ ಮಾಡಿದ ಪಾಪಿಗಳಿಗೆ ಯಾವ ಶಿಕ್ಷೆ ಕೊಡುತ್ತೀರಿ? ಇದು ಹರೀಶ್ ಪತ್ನಿ ಮುಂದಿಡುವ ಪ್ರಶ್ನೆ.....
ಈ ಪ್ರಕರಣದಲ್ಲಿ ಹರೀಶ್ ಬಂಗೇರಾ ನಕಲಿ ಐಡಿ ಮಾಡಿ ಪೋಸ್ಟ್ ಹಾಕಿದ್ದ ಹುಯೇಝ್ ಮತ್ತು ತುಯೇಝ್ ಎಂಬಿಬ್ಬರನ್ನು ಪೊಲೀಸರು ಆಗಲೇ ಬಂಧಿಸಿದ್ದರು.ಬಳಿಕ ವಿಚಾರಣೆ ಎಲ್ಲ ನಡೆದು ಅವರು ಜಾಮೀನಿನ ಮೇಲೆ ಹೊರಗೆ ಬಂದಿದ್ದಾರೆ ಕೂಡ!ಹರೀಶ್ ಈಗ ನಿರುದ್ಯೋಗಿಯಾಗಿದ್ದಾರೆ.ಎಸಿ ಮೆಕ್ಯಾನಿಕ್ ಆಗಿದ್ದರಿಂದ ತಕ್ಕ ಮಟ್ಟಿನ ಸಂಬಳವೂ ಇವರಿಗಿತ್ತು.ಆದರೆ ಈ ಸುಳ್ಳು ಕೇಸಲ್ಲಿ ಸಿಲುಕಿಕೊಂಡ ಬಳಿಕ ಅವರ ಸಂಸ್ಥೆ ಕೆಲಸದಿಂದ ತೆಗೆದಿದ್ದೂ ಅಲ್ಲದೆ ಇವರಿಗೆ ಸಿಗಬೇಕಾದ ಹಣವನ್ನೂ ನೀಡದೆ ಬಾಕಿ ಇಟ್ಟುಕೊಂಡಿದೆ.ಈ ದುಡ್ಡು ನನಗೆ ಕೊಡುವವರು ಯಾರು? ಎಂಬುದು ಹರೀಶ್ ಪ್ರಶ್ನೆ
ಇನ್ನು ಮುಂದೆ ಸೌದಿಗೆ ಹೋಗದೇ ಊರಲ್ಲೇ ಉದ್ಯೋಗ ಮಾಡುವ ನಿರ್ಧಾರಕ್ಕೆ ಹರೀಶ್ ಬಂದಿದ್ದಾರೆ.ಜೊತೆಗೆ ಈ ಪ್ರಕರಣದ ಹಿಂದಿರುವ ನಿಜವಾದ ಅಪರಾಧಿಗಳ ವಿರುದ್ಧ ಕಾನೂನು ಹೋರಾಟ ಮುಂದುವರೆಸುವ ಶಪಥವನ್ನೂ ಮಾಡಿದ್ದಾರೆ.ಹರೀಶ್ ಮತ್ತವರ ಪತ್ನಿ ಸುಮನಾಗೆ ಈ ಪ್ರಕರಣದಲ್ಲಿ ನ್ಯಾಯ ಸಿಗಲಿ ಎಂದು ಹಾರೈಸೋಣ..
Kshetra Samachara
20/08/2021 10:01 pm