ಕುಂದಾಪುರ: ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗಳು ಆಂಬುಲೆನ್ಸ್ ನಲ್ಲೇ ಬಂದು ಪರೀಕ್ಷೆ ಬರೆದ ಘಟನೆ ನಡೆದಿದೆ.ಇದು ನಡೆದಿರುವುದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ.
ತಾಲೂಕಿನ ಕೊಡಪಾಡಿ ಬಳಿ ನಡೆದ ಬೈಕ್ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದರು. ಗಾಯಾಳುಗಳನ್ನು ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜು ವಿದ್ಯಾರ್ಥಿಗಳಾದ ಮಸಾಯಿದ್ ಮತ್ತು ವಾಜಿದ್ ಎಂದು ಗುರುತಿಸಲಾಗಿದೆ.
ಪ್ರಥಮ ವರ್ಷದ ಪದವಿ ಪರೀಕ್ಷೆ ಬರೆಯಲು ಶಿರೂರಿನಿಂದ ಬೈಕ್ ಮೂಲಕ ಬಂದಿದ್ದ ಮಸಾಯಿದ್ ಗಂಗೊಳ್ಳಿಗೆ ತೆರಳಿ ಅಲ್ಲಿಂದ ಸ್ನೇಹಿತ ವಾಜಿದ್ ಅವರನ್ನು ಕರೆದುಕೊಂಡು ತೆರಳುತ್ತಿದ್ದ ಸಂದರ್ಭ ಕೊಡಪಾಡಿ ಬಳಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಬೈಕ್ ಗೆ ಢಿಕ್ಕಿಯಾಗಿದೆ.
ತೀವ್ರವಾಗಿ ಗಾಯಗೊಂಡ ವಿದ್ಯಾರ್ಥಿಗಳನ್ನು ಗಂಗೊಳ್ಳಿಯ ಆಪತ್ಬಾಂಧವ ಆಂಬುಲೆನ್ಸ್ ನ ನಿರ್ವಾಹಕ ಇಬ್ರಾಹಿಂ ಗಂಗೊಳ್ಳಿ ಮತ್ತು ತಂಡ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು.
ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದ ವಿದ್ಯಾರ್ಥಿಗಳು ಆಂಬುಲೆನ್ಸ್ ನಲ್ಲೇ ಭಂಡಾರ್ಕಾರ್ಸ್ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದಾರೆ. ಕಾಲೇಜು ಆಡಳಿತ ಅವರಿಗೆ ಪರೀಕ್ಷೆ ಬರೆಯಲು ಅನುಕೂಲ ಮಾಡಿಕೊಟ್ಟಿತು.
Kshetra Samachara
19/08/2021 05:17 pm