ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ ಕುಬೆವೂರು ರೈಲ್ವೆ ಸೇತುವೆ ಬಳಿ ದುಷ್ಕರ್ಮಿಗಳು ಬಿಸಾಡಿದ ಲೋಡುಗಟ್ಟಲೆ ತ್ಯಾಜ್ಯವನ್ನು ಕಿಲ್ಪಾಡಿ ಪಂಚಾಯತ್ ಉಪಾಧ್ಯಕ್ಷರು ಹಾಗೂ ಸಿಬ್ಬಂದಿ ತೆರವುಗೊಳಿಸಿದ್ದಾರೆ.
ಕಿಲ್ಪಾಡಿ ಪಂಚಾಯತ್ ಉಪಾಧ್ಯಕ್ಷ ಗೋಪಿನಾಥ ಪಡಂಗ ನೇತೃತ್ವದಲ್ಲಿ ಪಂಚಾಯತ್ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ತ್ಯಾಜ್ಯವನ್ನು ಸಂಗ್ರಹಿಸಿ ಸ್ಥಳದಲ್ಲಿ ಬೆಂಕಿ ಕೊಡುವ ಮೂಲಕ ಸುಟ್ಟು ಹಾಕಿದ್ದಾರೆ.
ಈ ಬಗ್ಗೆ ಗೋಪಿನಾಥ ಪಡಂಗ ಮಾತನಾಡಿ, ಕಳೆದ ಕೆಲವು ಸಮಯದಿಂದ ಕುಬೆವೂರು ರೈಲ್ವೆ ಸೇತುವೆ ಬಳಿ ಕೆಲ ದುಷ್ಕರ್ಮಿಗಳು ತ್ಯಾಜ್ಯ ಎಸೆದು ಹೋಗುತ್ತಿದ್ದು, ಪಂಚಾಯತ್ ಸಿಬ್ಬಂದಿ ಪರಿಸರದಲ್ಲಿ ಎಚ್ಚರಿಕೆಯ ನಾಮಫಲಕ ಹಾಕಿದರೂ ಯಾವುದೇ ಪರಿಣಾಮ ಬೀರಿಲ್ಲ. ಸ್ವಚ್ಛತೆ ಬಗ್ಗೆ ಗಮನ ಹರಿಸಬೇಕಾದ ನಾಗರಿಕರು ತ್ಯಾಜ್ಯ ಎಸೆದು ಹೋಗುತ್ತಿರುವುದು ಬೇಸರದ ಸಂಗತಿ ಎಂದರು.
ಮುಂದಿನ ದಿನಗಳಲ್ಲಿ ಪಂಚಾಯಿತಿ ವ್ಯಾಪ್ತಿಯ ತ್ಯಾಜ್ಯವನ್ನು ಎಸೆಯುವ ಕೆಲ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಈ ಮೂಲಕ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಂಚಾಯಿತಿ ಸಿಬ್ಬಂದಿ ಸುರೇಶ್, ಯತೀಶ್, ಸಬಿತಾ, ರಮೇಶ್, ತಾರಾನಾಥ್ ಮತ್ತಿತರರು ತ್ಯಾಜ್ಯವನ್ನು ತೆರವುಗೊಳಿಸುವ ಕಾರ್ಯದಲ್ಲಿ ಭಾಗಿಯಾದರು.
Kshetra Samachara
23/02/2021 07:35 pm