ಉಡುಪಿ: ರಾಷ್ಟ್ರಪತಿಗಳ ಶೌರ್ಯಪ್ರಶಸ್ತಿಗೆ ಚಿಕ್ಕಾಸೂ ಬೆಲೆ ನೀಡದ ಕೇರಳ ಸರಕಾರದ ಕತೆ ಇದು.ಕೇರಳದ ಕಲ್ಲಿಕೋಟೆ ಜಿಲ್ಲೆಯ ಕೊಯಿಲಾಂಡಿಯ 82 ವರ್ಷದ ವಿಜಯಲಕ್ಷ್ಮಿ ಅಮ್ಮ ಇದೀಗ ತಮ್ಮ ಪತಿ ಬಾಲಕೃಷ್ಣ ನಾಯರ್ ಗೆ ಸಿಕ್ಕಿದ ಶೌರ್ಯ ಪ್ರಶಸ್ತಿಯ ಗೌರವಧನ ಪಡೆಯಲು ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನವನ್ನು ಆಶ್ರಯಿಸಿದ್ದಾರೆ.
ಮಂಗಳೂರಿನ ಬಂದರ್ ಪೋಲೀಸ್ ಠಾಣೆಯಲ್ಲಿ ಸಬ್ ಇನ್ಸ್‍ಪೆಕ್ಟರ್ ಹುದ್ದೆಗೆ ಆಯ್ಕೆಯಾಗಿದ್ದ ವಿಜಯಲಕ್ಷ್ಮೀ ಅಮ್ಮನ ಪತಿ ನಾಯರ್, ಅನಂತರದಲ್ಲಿ ಹಂಪನಕಟ್ಟೆ , ಬದಿಯಡ್ಕ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಬಳಿಕ ಕಾಸರಗೋಡಿನಲ್ಲಿದ್ದುದರಿಂದ ಅಧಿಕೃತವಾಗಿ ಕೇರಳ ಪೋಲೀಸ್ ಇಲಾಖೆಗೆ ಸೇರ್ಪಡೆಗೊಂಡರು.
1961ರಲ್ಲಿ ಮಂಜೇಶ್ವರ ಠಾಣೆಯಲ್ಲಿದ್ದಾಗ ಅಂದಿನ ಅಂತರ್ ರಾಜ್ಯ ಡಕಾಯಿತ ಕಿಟ್ಟುಅಗಸ ತನ್ನ ಸಂಗಡಿಗರೊಂದಿಗೆ ಬದಿಯಡ್ಕದ ಭಟ್ಟರೋರ್ವರ ಮನೆಗೆ ದಾಳಿ ನಡೆಸಿದಾಗ ಕಿಟ್ಟು ಅಗಸನ ಮೇಲೆ ಬರಿಗೈಯಲ್ಲೇ ಮುಗಿಬಿದ್ದ ನಾಯರ್ ಆತನನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾದರು. ಡಕಾಯಿತನನ್ನು ಲಾಕಪ್‍ಗೆ ಸೇರಿಸಿದ ನಾಯರ್ ಸಾರ್ವಜನಿಕರಿಂದಲೂ ಪ್ರಶಂಸೆಗಳಿಸಿದರು.
ಆರು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಕಿಟ್ಟು ಅಗಸನನ್ನು ದೊಚಿದ ಹಣ ಹಾಗೂ ಒಡವೆಗಳ ಸಹಿತ ಬಂಧಿಸುವಲ್ಲಿ ತೋರಿದ ಅಪ್ರತಿಮ ಸಾಹಸ ಹಾಗೂ ಸಮಯೋಚಿತ ಕಾರ್ಯಚರಣೆಯಿಂದ ಗಣರಾಜೋತ್ಸವದಂದು ಬಾಲಕೃಷ್ಣ ನಾಯರ್ ರಾಷ್ಟಪತಿಗಳಿಂದ ಶೌರ್ಯ ಪ್ರಶಸ್ತಿ ಹಾಗೂ ಚಿನ್ನದ ಪದಕಗಳಿಸಿದರು.
ಸುಮಾರು 30 ವರ್ಷಗಳ ಸೇವೆಸಲ್ಲಿಸಿದ ಬಾಲಕೃಷ್ಣ ನಾಯರ್ 1981ರಲ್ಲಿ ನಿವೃತ್ತರಾದರು. ಪ್ರಶಸ್ತಿ ಸಿಕ್ಕಿದ 1961ರಿಂದ 1975ವರೆಗೆ ತಿಂಗಳಿಗೆ ಬರೇ 25 ರೂಪಾಯಿಗಳ ನಗದು ಪುರಸ್ಕಾರ ಪಡೆಯುತಿದ್ದ ನಾಯರ್ ಅಲ್ಲಿಂದ ತಮ್ಮ ಜೀವಿತಾವಧಿಯ ತನಕವೂ ತಿಂಗಳಿಗೆ 100 ರೂಗಳನ್ನು ಪಡೆಯುತಿದ್ದರು.
1988ರಲ್ಲಿ ಬಾಲಕೃಷ್ಣ ನಾಯರರ ಮರಣಾನಂತರ ಅವರ ಪತ್ನಿ ದಕ್ಷಿಣ ಕನ್ನಡದ ಸುರತ್ಕಲ್‍ನಲ್ಲಿ ನೆಲಸತೊಡಗಿದರು. ನಿಯಮದ ಪ್ರಕಾರ ಪ್ರಶಸ್ತಿ ವಿಜೇತರ ಪತ್ನಿಗೂ ಕುಟುಂಬದ ಪಿಂಚಣಿಯೊಂದಿಗೆ ಈ ಶೌರ್ಯ ಪ್ರಶಸ್ತಿಯ ನಗದು ಪುರಸ್ಕಾರವೂ ಸಿಗಬೇಕಾಗಿತ್ತು. ಆದರೆ ಪ್ರಶಸ್ತಿ ಬಾಬ್ತು ಸಿಗಬೇಕಾದ 100 ರೂಗಳನ್ನು ಪಡೆಯಲು ಇಂದಿನವರೆಗೂ ಪ್ರತಿ ತಿಂಗಳೂ ವಿಧವೆ ವಿಜಯಮ್ಮ ಕಲ್ಲಿಕೋಟೆಯ ಕೊಯಿಲಾಂಡಿಗೆ ಸತಃ ಹೋಗಿ ಅಲ್ಲಿನ ಪೋಲೀಸ್‍ಠಾಣೆಯಲ್ಲಿ ಅರ್ಜಿ ಸಲ್ಲಿಸಬೇಕಾಗಿದೆ.
ಅತ್ತ ನ್ಯಾಯಾಲಯದಲ್ಲಿ ದಾವೆ ಹೂಡಿ ನ್ಯಾಯಯುತವಾಗಿ ಬರಬೇಕಾದ ನಗದಿಗಾಗಿ ದಶಕಗಳಿಂದ ಹೋರಾಟ ಮಾಡುತ್ತಿದ್ದ ಈ ವಯೋವೃದ್ಧೆ ವಿಜಯಲಕ್ಷ್ಮಿಗೆ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಡಾ.ರವೀಂದ್ರನಾಥ್ ಶಾನುಭಾಗ್ ನ್ಯಾಯ ಕೊಡಿಸುವ ಭರವಸೆ ನೀಡಿದ್ದಾರೆ.
Kshetra Samachara
28/01/2021 11:21 am