ಪಬ್ಲಿಕ್ ನೆಕ್ಸ್ಟ್ ವಿಶೇಷ
ಉಡುಪಿ: ಸಂಡೇ ಜಾವ, ಮಂಡೇ ಹಾರ್ಲಿ ಡೇವಿಡ್ ಸನ್, ಟ್ಯೂಸ್ಡೇ ಲ್ಯಾಂಬ್ರಟ...ಹೀಗೆ ಪಟ್ಟಿ ಬಲು ದೊಡ್ಡದಾಗುತ್ತಲೇ ಹೋಗುತ್ತವೆ. ಅಷ್ಟೊಂದು ಬೈಕ್ ಗಳ ಸಂಗ್ರಹ ಈ ಯುವಕನ ಬಳಿ ಇದೆ!
ಉಡುಪಿಯ ಆತ್ರಾಡಿ ಸಮೀಪದ ರೋಶನ್ ಶೆಟ್ಟಿ ಒಂದು ಅಪೂರ್ವ ಹವ್ಯಾಸ ಹೊಂದಿರುವ ಯುವಕ. ಇವರ ಬಳಿ ಮೂವತ್ತು ಬೈಕ್ ಗಳ ದೊಡ್ಡ ಸಂಗ್ರಹ ಇದೆ ಎಂದರೆ ನೀವು ನಂಬಲೇಬೇಕು!
ರೋಶನ್ ಶೆಟ್ಟಿ ,ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್. ಬಾಲ್ಯದಿಂದಲೇ ಇವರಿಗೆ ಬೈಕ್ ಮೇಲೆ ಮೋಹ. ತಮ್ಮ ಸಂಪಾದನೆಯ ಬಹುಪಾಲು ಹಣವನ್ನು ಬೈಕ್ ಖರೀದಿಗೆಂದೇ ವೆಚ್ಚ ಮಾಡುತ್ತಾರೆ. ಹತ್ತು ವರ್ಷಗಳಲ್ಲಿ ಮೂವತ್ತು ವೆರೈಟಿಯ ಬೈಕ್ ಕಲೆಕ್ಶನ್ ಹೊಂದಿದ್ದು,ಇವರ ಮನೆಯೀಗ ಸುತ್ತಮುತ್ತಲಿನ ಯುವಕರಿಗೆ ಆಕರ್ಷಣೆಯ ಕೇಂದ್ರಬಿಂದು ಎನಿಸಿದೆ.
ರೋಷನ್ ಸಂಗ್ರಹದಲ್ಲಿ 1962 ಮಾಡೆಲ್ ನ ಜಾವ, 69 ರ ಲ್ಯಾಂಬ್ರಟ, 70 ರ ದಶಕದ ವಿಜಯ್ ಸೂಪರ್ ಇವೆ. ಸುಮಾರು ಏಳು ಬಗೆಯ ಎಸ್ಡಿ ಬೈಕ್ ಇವೆ. 35 ಸಿಸಿಯ ರಾಯಲ್ ಎನ್ ಫೀಲ್ಡ್ ಮೋಫಾ ಅತ್ಯಂತ ಸಣ್ಣ ಬೈಕ್. ಆದ್ರೆ, ಹಾರ್ಲೆ ಡೇವಿಡ್ ಸನ್ ಲೇಟೆಸ್ಟ್ ಬ್ರಾಂಡ್ ನದ್ದು. ಇವೆಲ್ಲ ಹಳೆ ಕಾಲದ್ದು , ಬರೀ ಸಂಗ್ರಹಕ್ಕೆ ಮಾತ್ರ ಎಂದುಕೊಳ್ಳಬೇಡಿ. ಇವೆಲ್ಲ ಸೂಪರ್ ಕಂಡೀಷನ್ ನಲ್ಲಿ ಇರೋದರ ಜೊತೆಗೆ ಸಾಕಷ್ಟು ಈವೆಂಟ್ ಗಳಲ್ಲೂ ಭಾಗಿಯಾಗಿವೆ. ಹಲವು ಸ್ಪರ್ಧೆಗಳಲ್ಲೂ ಇವರ ಬೈಕ್ ಗಳು ಓಡಿವೆ. ಪ್ರತಿ ಬೈಕನ್ನೂ ಸುಸ್ಥಿತಿಯಲ್ಲಿಟ್ಟಿದ್ದಾರೆ. ಹೀಗಾಗಿ ಈ ಬೈಕ್ ಗಳು ಒಂದೇ ಕಿಕ್ ಗೆ ಸ್ಟಾರ್ಟ್ ಆಗುತ್ತವೆ!
ಇತ್ತೀಚೆಗೆ ಇವರು ಹೊಸದಾಗಿ ಮನೆ ಕಟ್ಟಿಸಿದ್ದಾರೆ. ಮನೆಯ ಆವರಣದಲ್ಲಿ ತನ್ನ " ವೇಗ ದೂತ ಸಂಗಾತಿ" ಗಳಿಗೊಂದು ಸುಂದರ ಶೆಡ್ ನಿರ್ಮಿಸುವ ಪ್ಲಾನ್ ಹಾಕಿಕೊಂಡಿದ್ದಾರೆ. ಸದ್ಯ ಪ್ರತೀ ವಾರ ಇವರು ಒಂದೊಂದು ಬೈಕ್ ಏರಿ ಜಾಲಿ ರೈಡ್ ಗೆ ಹೊರಡುತ್ತಾರೆ. ಯಾರಿಗುಂಟು ಯಾರಿಗಿಲ್ಲ ಈ ಭಾಗ್ಯ, ಅಲ್ವೇ?
Kshetra Samachara
23/01/2021 06:34 pm