ಉಡುಪಿ: ನಗರದ ಆದರ್ಶ ಆಸ್ಪತ್ರೆಯ ಬಳಿ ದಿನವಿಡೀ ಜನ ಸಂಚಾರ ಇರುವ ನಡುರಸ್ತೆಯಲ್ಲಿಯೇ ಅಸಹಾಯಕ ಸ್ಥಿತಿಯಲ್ಲಿ ಕಂಡು ಬಂದಿರುವ ನಾಗರಹಾವನ್ನು ಯು.ಬಿ.ನಾಗರಾಜ ಎಂಬವರು ಸೆರೆ ಹಿಡಿದು, ಸುರಕ್ಷಿತ ನೆಲೆಗಾಗಿ ನಗರದ ಹೊರ ವಲಯದ ಅರಣ್ಯಭೂಮಿಯಲ್ಲಿ ಬಿಟ್ಟುಬಂದಿದ್ದಾರೆ.
ಸುಮಾರು ಐದು ಅಡಿ ಉದ್ದದ ನಾಗರಹಾವು ಜನ ಸಂಚಾರ ಇರುವ ರಸ್ತೆಯಲ್ಲಿ ಸಂಚರಿಸುತ್ತಿದ್ದುದರಿಂದ ಭೀತಿಯ ವಾತಾವರಣ ಎದುರಾಗಿತ್ತು. ಸುಡುಬಿಸಿಲಿಗೆ ಕಾದಿರುವ ಕಾಂಕ್ರೀಟ್ ರಸ್ತೆಯಲ್ಲಿ ಈ ಹಾವಿಗೆ ತೆವಳಿಕೊಂಡು ಮುಂದೆ ಸಾಗಲು ಭಾರಿ ಕಷ್ಟವೂ ಆಗುತ್ತಿತ್ತು.
ತಕ್ಷಣ ಸ್ಥಳೀಯ ನಿವಾಸಿ ರವಿಚಂದ್ರನ್ ಅವರು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ ಮೇಸ್ತ ಶಿರೂರು ಅವರಿಗೆ ಮಾಹಿತಿ ನೀಡಿದರು. ಆ ಕೂಡಲೇ ಅವರು ವಿಷಕಾರಿ ಹಾವುಗಳನ್ನು ಹಿಡಿಯುವುದರಲ್ಲಿ ಪರಿಣತಿ ಹೊಂದಿರುವ ಅಂಬಾಗಿಲಿನ ಯು.ಬಿ.ನಾಗರಾಜ್ ಅವರ ಮೂಲಕ ನಾಗರಹಾವನ್ನು ರಕ್ಷಣೆ ಮಾಡಿದ್ದಾರೆ.
Kshetra Samachara
19/01/2021 01:36 pm