ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಕ್ಯಾನ್ಸರ್ ರೋಗವನ್ನು ಹಿಮ್ಮೆಟ್ಟಿಸಿದ ಕೃಷಿಕ: ಥಾಮಸ್ ಗ್ರೇಜರಿ ರೆಬೆಲ್ಲೋ ಸಾಧನೆ

ಮಂಗಳೂರು: ಸಾಧನೆ ಮಾಡಬೇಕೆಂಬ ಗುರಿಯಿದ್ದಲ್ಲಿ ಎಂತಹ ಅಡೆತಡೆಗಳು, ಸಂಕಷ್ಟಗಳು ಇದ್ದರೂ ಅವು ನಮ್ಮ ಮುಂದೆ ಸುಳಿಯೋದಿಲ್ಲ. ಇವರ ದೇಹವನ್ನು ಕ್ಯಾನ್ಸರ್ ರೋಗ ಬಾಧಿಸುತ್ತಿದ್ದರೂ, ಅವರು ತಮ್ಮ ಪಾಡಿಗೆ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಕ್ಯಾನ್ಸರ್ ಮಹಾಮಾರಿಗೆ ಸೆಡ್ಡು ಹೊಡೆದು ಕೃಷಿಯಲ್ಲಿ ಸಾಧನೆಗೈದಿದ್ದಾರೆ. ಯಾರಿವರೆಂಬ ಕುತೂಹಲವಿದೆಯೇ ಈ ವಿಶೇಷ ಸುದ್ದಿ ಓದಿ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಪುಚ್ಚೆಮೊಗರು ಗ್ರಾಮದ ನಿವಾಸಿ ಥಾಮಸ್ ಗ್ರೇಜರಿ ರೆಬೆಲ್ಲೋ ಅವರನ್ನು ಗಂಟಲಿನ ಕ್ಯಾನ್ಸರ್ ಬಾಧಿಸುತ್ತಿದ್ದರೂ ಅದನ್ನು ಕ್ಯಾರೇ ಎನ್ನದೇ ತಮ್ಮ ಭೂಮಿಯಲ್ಲಿ ವೈವಿಧ್ಯಮಯ ಕೃಷಿ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಥಾಮಸ್ ಗ್ರೇಜರಿ ರೆಬೆಲ್ಲೋ ಅವರ ಪತ್ನಿ ಹಾಗೂ ಪುತ್ರ ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಮನೆಯಲ್ಲಿ ಒಂಟಿಯಾಗಿದ್ದರೂ ಹಗಲು ಪೂರ್ತಿ ಕೃಷಿ ಚಟುವಟಿಕೆಯಲ್ಲಿ ಬ್ಯುಸಿಯಾಗಿರುತ್ತಾರೆ. ಥಾಮಸ್ ಗ್ರೇಜರಿ ರೆಬೆಲ್ಲೋ ಅವರೂ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಏಕಾಏಕಿ ಗಂಟಲಿನ ಕ್ಯಾನ್ಸರ್‌ಗೆ ತುತ್ತಾದ ಅವರು ತಾಯ್ನಾಡಿಗೆ ವಾಪಸ್ ಆದರು. ಅಲ್ಲಿಂದ ಥಾಮಸ್ ಗ್ರೇಜರಿ ರೆಬೆಲ್ಲೋ ಅವರ ಕೃಷಿ ಚಟುವಟಿಕೆ ಆರಂಭಗೊಂಡಿತು.

ಅವರು ತಮ್ಮ 1.62 ಎಕರೆ ಜಾಗದಲ್ಲಿ ತೆಂಗು, ಅಡಿಕೆ, ವೀಳ್ಯದೆಲೆ, ಹಣ್ಣಿನ ಕೃಷಿಯನ್ನು ಮಾಡಿದ್ದಾರೆ. ಅಲ್ಲದೆ ಹೀರೆಕಾಯಿ, ಅಲಸಂದೆ, ಬೆಂಡೆಕಾಯಿ, ಹರಿವೆ ತರಕಾರಿಯನ್ನು ಬೆಳೆಸುತ್ತಿದ್ದಾರೆ. ಇನ್ನು ಇದೆಲ್ಲದರ ಜೊತೆಗೆ ದನಗಳನ್ನು ಸಾಕಿಕೊಂಡು ಅವುಗಳ ಆರೈಕೆಯನ್ನೂ ಮಾಡುತ್ತಿದ್ದಾರೆ. ಥಾಮಸ್ ಅವರು ಪ್ರಮುಖವಾಗಿ ವೀಳ್ಯದೆಲೆ ಕೃಷಿ ಮಾಡುತ್ತಿದ್ದು, ಅಚ್ಚುಕಟ್ಟಾಗಿ ಚಪ್ಪರದ ವ್ಯವಸ್ಥೆ ಮಾಡಿ ಸುಮಾರು 380 ಬಳ್ಳಿಗಳನ್ನು ನೆಟ್ಟು ಬೆಳೆಸಿದ್ದಾರೆ.

60 ಸಾವಿರ ರೂ. ಖರ್ಚು ಮಾಡಿ ಜುಲೈ ತಿಂಗಳಲ್ಲಿ ವೀಳ್ಯದೆಲೆ ಚಪ್ಪರ ಹಾಕಿದ್ದು ಡಿಸೆಂಬರ್-ಜನವರಿಯಲ್ಲಿ ಕೊಯ್ಲಿಗೆ ಬಂದಿದೆ. ವಾರಕ್ಕೊಮ್ಮೆ ವೀಳ್ಯದೆಲೆ ಕೊಯ್ಯುವುದಕ್ಕೆ ಸಿಗುತ್ತಿದ್ದು ಪ್ರಾರಂಭದಲ್ಲಿ ಉತ್ತಮ ಬೆಲೆ ಲಭ್ಯವಾಯಿತು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಒಂದಷ್ಟು ತೊಂದರೆಯಾದರೂ ಇದೀಗ ವಾರವೊಂದಕ್ಕೆ ವೀಳ್ಯದೆಲೆಯನ್ನು ಮಾರಾಟ ಮಾಡಿ 2,500 ರೂ. ಗಳಿಸುತ್ತಿದ್ದಾರಂತೆ. ಹನಿ ನೀರಾವರಿ ಪದ್ಧತಿ, ಹಟ್ಟಿ ಗೊಬ್ಬರವನ್ನು ಬಳಸಿ ವೀಳ್ಯದೆಲೆ ಬೆಳೆಸಲಾಗುತ್ತಿದೆ. ಕೀಟಗಳ ಬಾಧೆ ತಪ್ಪಿಸಲು ಕಹಿಬೇವಿನ ಎಣ್ಣೆಯನ್ನು ಸ್ಪ್ರೇ ಮಾಡುತ್ತಾರಂತೆ.

ನೂರಕ್ಕೂ ಅಧಿಕ ತೆಂಗಿನ ಮರಗಳು ಇವರ ತೋಟದಲ್ಲಿದ್ದು, ಇದರಲ್ಲಿ 40 ಗೆಂದಾಳಿ ಜಾತಿಯ ತೆಂಗಿನ ಮರಗಳಿವೆ. ಗೆಂದಾಳಿ ಸೀಯಾಳಕ್ಕೆ ಉತ್ತಮ ಬೇಡಿಕೆಯಿದ್ದು, ನರ್ಸರಿಯವರು ಇವರು ಬೆಳೆದ ಗೆಂದಳಿ ಜಾತಿಯ ತೆಂಗಿನ ಮರದ ಕಾಯಿಯನ್ನು ಗಿಡ ಮಾಡುವುದಕ್ಕಾಗಿ ಕೊಂಡೊಯ್ಯುತ್ತಾರಂತೆ. ತೆಂಗಿನ ಮರದ ಜೊತೆಗೆ 300ಕ್ಕೂ ಅಧಿಕ ಅಡಿಕೆ ಸಸಿಗಳನ್ನು ನೆಟ್ಟು ಪೋಷಿಸಿದ್ದಾರೆ. ಇನ್ನಷ್ಟೇ ಈ ಗಿಡಗಳು ಫಲ ಕೊಡಬೇಕಾಗಿದೆ.

ನೀರಿನ ಸಮಸ್ಯೆಯಿದ್ದರೂ ಲಭ್ಯವಿರುವ ನೀರಿನಲ್ಲಿಯೇ ಥಾಮಸ್ ಅವರು ಕೃಷಿ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈವರೆಗೆ ಒಟ್ಟು 10 ಬೋರ್‌ವೆಲ್‌ಗಳನ್ನು ಕೊರೆಸಿದ ಅವರು ಇದರಲ್ಲಿ 9 ಬೋರ್ ವೆಲ್ ನಿಷ್ಪ್ರಯೋಜಕವಾಯಿತು. ಕೊನೆಯದಾಗಿ ಕೊರೆದ 10ನೇ ಬೋರ್‌ವೆಲ್‌‌ನಲ್ಲಿ ಒಟ್ಟು ಅರ್ಧ ಇಂಚು ನೀರು ಲಭ್ಯವಾಯಿತು. ಆ ಅರ್ಧ ಇಂಚು ನೀರನ್ನೆ ಬಳಸಿಕೊಂಡು ತಮ್ಮ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.

ನೀರಿಗಾಗಿ ಒಂದು ಬೃಹದಾಕಾರದ ನೀರಿನ ತೊಟ್ಟಿ ನಿರ್ಮಾಣ ಮಾಡಿದ್ದಾರೆ. ದಿನ ಪೂರ್ತಿ ಬೋರ್‌ವೆಲ್ ಪಂಪ್ ಆನ್ ಮಾಡಿ ಅದರಲ್ಲಿ ಅರ್ಧ ಇಂಚು ಲಭ್ಯವಾಗುವ ನೀರನ್ನು ಈ ನೀರಿನ ತೊಟ್ಟಿನಲ್ಲಿ‌ ಶೇಖರಣೆ ಮಾಡುತ್ತಾರೆ. ಅಲ್ಲಿಂದ ಪಂಪ್ ವ್ಯವಸ್ಥೆ ಮಾಡಿ ಕೃಷಿಗೆ ನೀರು ಹಾಯಿಸಲಾಗುತ್ತೆ. ನೀರಿನ ಪೈಪ್ ಅಳವಡಿಕೆ ಕೆಲಸವನ್ನು ಸಹ ತಮಗೆ ಬೇಕಾದ ಹಾಗೆಯೇ ಥಾಮಸ್ ಅವರೇ ಸೆಟ್ ಮಾಡಿಕೊಂಡಿದ್ದಾರೆ.

ಮುಂಜಾನೆ 5.30ಗೆ ಏಳುವ ಪರಿಪಾಠವನ್ನು ಬೆಳೆಸಿಕೊಂಡಿರುವ ಥಾಮಸ್ ಅವರು ನಿತ್ಯ ಕರ್ಮವನ್ನು ಪೂರೈಸಿ ತಮ್ಮ ಆಹಾರ ತಯಾರು ಮಾಡಿಕೊಳ್ಳುತ್ತಾರೆ. ಆ ಬಳಿಕ ಕೃಷಿ ಕೆಲಸ ಪ್ರಾರಂಭಿಸಿದರೆ ಊಟದ ವಿರಾಮ ಹೊರತುಪಡಿಸಿ ಸಂಜೆ 5.30ವರೆಗೂ ಫುಲ್ ಬ್ಯುಸಿಯಾಗಿರ್ತಾರೆ. ಥಾಮಸ್ ಅವರ ಜೊತೆಗೆ ಕೆಲಸಕ್ಕೆಂದು ಒಬ್ಬರು ಕೆಲಸದಾಳು ಜೊತೆಗಿರುತ್ತಾರೆ. ಹೀಗಾಗಿ ಜಂಟಿಯಾಗಿ ಕೃಷಿಯಲ್ಲಿ ತೊಡಗಿಕೊಳ್ಳುತ್ತಾರೆ.

ಥಾಮಸ್ ಗ್ರೇಜರಿ ರೆಬೆಲ್ಲೋ ಅವರು ಮಾತನಾಡಿ, ಕೃಷಿಯಲ್ಲಿ ಫುಲ್ ಬ್ಯುಸಿಯಾಗಿರುವುದರಿಂದ ಮನಸ್ಸಿನಲ್ಲಿ ಬೇರೆ ಯಾವುದೇ ನೆಗೆಟಿವ್ ಆಲೋಚನೆಗಳು ಬರೋದಿಲ್ಲ. ಆರೋಗ್ಯ ಸಮಸ್ಯೆಯಿದ್ದರೂ ಕೃಷಿಯಲ್ಲಿ ತೊಡಗಿಕೊಂಡಿರುವುದರಿಂದ ನೆಮ್ಮದಿ ಇರುತ್ತದೆ. ಪ್ರಾರಂಭದಲ್ಲಿ ಡಯಾಬಿಟಿಸ್ ಇತ್ತು. ಇದಕ್ಕಾಗಿ ಮಾತ್ರೆಗಳನ್ನು ಸಹ ಸೇವಿಸುತ್ತಿದ್ದೆ. ಆದರೆ ಇದೀಗ ಬಿಸಿಲಿನಲ್ಲಿ ಕೃಷಿ ಕಾರ್ಯ ನಡೆಸುವುದರಿಂದ ಡಯಾಬಿಟಿಸ್ ಸಂಪೂರ್ಣ ಮಾಯವಾಗಿದೆ ಎಂದು ಹೇಳುತ್ತಾರೆ.

Edited By : Manjunath H D
Kshetra Samachara

Kshetra Samachara

13/01/2021 06:16 pm

Cinque Terre

22.47 K

Cinque Terre

2

ಸಂಬಂಧಿತ ಸುದ್ದಿ