ನೆಲ್ಯಾಡಿ: ಜಗದೆಲ್ಲೆಡೆ ನಿನ್ನೆ ಕ್ರಿಸ್ಮಸ್ ಹಬ್ಬದ ಸಡಗರ, ಖುಷಿ ಇತ್ತು. ಈ ಸಮಯದಲ್ಲಿ ಮನೆಯಲ್ಲಿ ಮಕ್ಕಳು ವಿವಿಧ ಬಗೆಯ ತಿನಿಸು ತಿಂದು, ಕೇಕ್ ತಯಾರಿಸಿ, ಹೊಸ ಬಟ್ಟೆ ತೊಟ್ಟು ಸಂಭ್ರಮ ಪಡುವುದು ಸಾಮಾನ್ಯ ಸಂಗತಿ.
ಆದರೆ, ಈ ಮಕ್ಕಳು ಹಾಗೇ ಮಾಡಲಿಲ್ಲ. ಬದಲಾಗಿ ಇವರಿಗೆ ತಮ್ಮ ಬಟ್ಟೆಬರೆ ಖರೀದಿಗೆ, ಉಡುಗೊರೆ ಖರೀದಿಸಲು ಪೋಷಕರು ನೀಡಿದ ಹಣವನ್ನು ತಾವು ಬಳಸದೇ ಒಂದು ಒಳ್ಳೆಯ ಕೆಲಸಕ್ಕೆ ವಿನಿಯೋಗ ಮಾಡಿ ಮಾದರಿಯಾಗಿದ್ದಾರೆ.
ಕಡಬ ತಾಲೂಕಿನ ನೆಲ್ಯಾಡಿ ಸಂತ ಅಲ್ಫೋನ್ಸಾ ಚರ್ಚಿನ 'ಕಿರಿಯ ಕುಸುಮ ಮಿಷನ್ ಲೀಗ್' ಮಕ್ಕಳ ತಂಡವು ಈ ಹಿಂದಿನಿಂದಲೂ ಸಮಾಜದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡುತ್ತಾ ಬಂದಿದೆ.
ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು,ಬಡವರಿಗೆ ಮನೆ ನಿರ್ಮಾಣಕ್ಕೆ ಸಹಕಾರ, ಸೇರಿದಂತೆ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ.
ಇದೀಗ ತಮಗೆ ಪೋಷಕರು ಹಬ್ಬ ಆಚರಿಸಲು ನೀಡಿದ ಹಣವನ್ನು ಒಟ್ಟುಗೂಡಿಸಿ ಈ 'ಕಿರಿಯ ಕುಸುಮ ಮಿಷನ್ ಲೀಗ್' ತಂಡದ ಮಕ್ಕಳು ನೆಲ್ಯಾಡಿ ಸಮೀಪದ
ಧರ್ಮಭಗಿನಿಯರು ನಡೆಸುವ ಪ್ರಶಾಂತ ನಿವಾಸದಲ್ಲಿನ ಅನಾಥ ಅಮ್ಮಂದಿರು ಮತ್ತು ಸಹೋದರರಿಗೆ ಉಡುಗೊರೆಗಳನ್ನು ನೀಡಿ ಅವರೊಂದಿಗೆ ಕ್ರಿಸ್ಮಸ್ ಆಚ ರಿಸಿದ್ದಾರೆ.
ಅನಾಥ ಆಶ್ರಮದ ಅಮ್ಮಂದಿರೂ ಮಕ್ಕಳೊಂದಿಗೆ ಕ್ರಿಸ್ಮಸ್ ಆಚರಿಸಿ ಸಂಭ್ರಮಿಸಿದರು.
ಈ ಸತ್ಕಾರ್ಯಕ್ಕೆ ಇವರಿಗೆ ಪ್ರೇರಣೆಯಾಗಿ ಚರ್ಚ್ ಧರ್ಮಗುರು ರೆ.ಫಾ. ಆದರ್ಶ್ ಜೋಸೆಫ್, ಸಹಧರ್ಮಗುರು ಸನೀಶ್ ಜೋಸೆಫ್,ಧರ್ಮಭಗಿನಿಯರಾದ ಸಿಸ್ಟರ್ ಪುಷ್ಪಾ, ಟೇಸಾ ಹಾಗೂ ಜೋಸ್ ಕೆ.ಜೆ. ರೋಯ್ ಎಂಬವರ ಪೂರ್ಣ ಬೆಂಬಲವೂ ಇತ್ತು.
'ಕಿರಿಯ ಕುಸುಮ ಮಿಷನ್ ಲೀಗ್'ನ ಮಕ್ಕಳು ಮಾಡಿದ ಈ ಸೇವಾ ಕೈಂಕರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.
Kshetra Samachara
26/12/2020 09:57 am