ಮಂಗಳೂರು: ಕೆಲವೊಂದು ದೇವಸ್ಥಾನಗಳಲ್ಲಿ ಶರ್ಟ್ - ಬನಿಯನ್ ಕಳಚಿ ಒಳಪ್ರವೇಶಿಸಬೇಕು ಎಂಬ ನಿಯಮವಿದೆ. ಇಲ್ಲದಿದ್ದಲ್ಲಿ ದೇವಾಲಯ ಪ್ರವೇಶ ನಿರಾಕರಿಸಲಾಗುತ್ತದೆ. ಇದೀಗ ಈ ನಿಯಮಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಂಗಳೂರಿನ ಎನ್ಇಸಿಎಫ್, ಧಾರ್ಮಿಕ ದತ್ತಿ ಇಲಾಖೆಗೆ ಅರ್ಜಿ ಸಲ್ಲಿಸಿದೆ.
ಕರಾವಳಿಯ ಅತ್ಯಂತ ಪುರಾತನ ಹಾಗೂ ಪ್ರಸಿದ್ಧ ದೇವಾಲಯಗಳಾದ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಕೊಲ್ಲೂರು ದೇವಸ್ಥಾನಗಳ ವಿರುದ್ಧ ಈ ಅರ್ಜಿ ಸಲ್ಲಿಕೆಯಾಗಿದೆ. ಈ ದೂರಿನಲ್ಲಿ ದೇವರ ದರ್ಶನ ಪಡೆಯಲು ದೇವಾಲಯ ಪ್ರವೇಶಕ್ಕೆ ಮುನ್ನ ಅಂಗಿ - ಬನಿಯನ್ ಕಳಚಿ ಪ್ರವೇಶ ಮಾಡುವ ಪದ್ಧತಿ ಅಷ್ಟೊಂದು ಸಮಂಜಸವಲ್ಲ. ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ದೇವಾಲಯಕ್ಕೆ ಪ್ರವೇಶಿಸಲು ಮೇಲುಡುಗೆ ಕಳಚುವ ಯಾವ ಪದ್ಧತಿಯೂ ಇಲ್ಲ. ಅಲ್ಲದೇ ಈ ನಿಯಮ ಸರಕಾರದ ನಿಯಮಾವಳಿಗಳ ಪ್ರಕಾರದಲ್ಲೂ ಇಲ್ಲ.
ಅಲ್ಲದೇ ಅಂಗಿ ಕಳಚುವುದರಿಂದ ಚರ್ಮವ್ಯಾಧಿ, ವಿಕಲಚೇತನರಿಗೆ ಮುಜುಗರವೂ ಉಂಟಾಗುತ್ತದೆ. ಜೊತೆಗೆ ಕೆಲ ಭಕ್ತರಿಗೆ ಗೊಂದಲವೂ ಉಂಟಾಗುತ್ತದೆ. ಆದ್ದರಿಂದ ಇದು ಸಂವಿಧಾನದ ಹಕ್ಕಿನ ಉಲ್ಲಂಘನೆಯೂ ಆಗುತ್ತಾದ್ದರಿಂದ ಪುರುಷರ ಮೇಲುಡುಗೆ ಕಳಚುವ ವಿಚಾರದಲ್ಲಿ ಎನ್ಇಸಿಎಫ್ ಆಕ್ಷೇಪ ಎತ್ತಿದೆ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಗೆ ತಕ್ಷಣ ಈ ನಿಯಮವನ್ನು ರದ್ದುಪಡಿಸುವಂತೆ ಎನ್ಇಸಿಎಫ್ ಒತ್ತಾಯಿಸಿದೆ. ಇದಕ್ಕೆ 15 ದಿನಗಳಲ್ಲಿ ಸ್ಪಷ್ಟ ಉತ್ತರ ನೀಡಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
Kshetra Samachara
23/09/2022 02:34 pm