ವಿಶೇಷ ವರದಿ: ರಹೀಂ ಉಜಿರೆ
ಉಡುಪಿ: ಉಡುಪಿಯ ಸರಕಾರಿ ಬಾಲಕಿಯರ ಕಾಲೇಜು ಐದಾರು ತಿಂಗಳಿಂದ ಹಿಜಾಬ್ ಹೋರಾಟದಿಂದಾಗಿ ಭಾರೀ ಸುದ್ದಿಯಲ್ಲಿತ್ತು. ಈಗ ಅದೇ ಕಾಲೇಜಿನ ಬಡ ಹುಡುಗಿಯೊಬ್ಬಳು ಸಾಧನೆ ಮಾಡುವ ಮೂಲಕ ಸುದ್ದಿಯಲ್ಲಿದ್ದಾಳೆ. ಎಲ್ಲಕ್ಕಿಂತ ವಿದ್ಯೆ ಮುಖ್ಯ ಎಂಬ ಸಂದೇಶವನ್ನೂ ಸಾರಿದ್ದಾಳೆ.
ಈಕೆ ಗಾಯತ್ರಿ. ಉಡುಪಿಯ
ಪ್ರಕಾಶ್ ದೇವಾಡಿಗ- ವಸಂತಿ ದಂಪತಿ ಪುತ್ರಿ. ಉಡುಪಿ ಸರಕಾರಿ ಬಾಲಕಿಯರ ಪದವಿಪೂರ್ವ ಕಾಲೇಜು ಹಿಜಾಬ್ ಹೋರಾಟಕ್ಕೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗುತ್ತಿದ್ದರೆ ಗಾಯತ್ರಿ ತನ್ನ ಗುಡಿಸಲಿನಂತಹ ಮನೆಯಲ್ಲಿ ಎಸ್ಸೆಸೆಲ್ಸಿ ಪರೀಕ್ಷೆಗಾಗಿ ಓದುತ್ತಿದ್ದಳು.
ಈಕೆಯ ತಂದೆ ಗಾರೆ ಕೆಲಸ ಮಾಡಿ ಇಬ್ಬರು ಮಕ್ಕಳನ್ನು ಸಾಕಬೇಕು. ಮನೆಯೊಳಗೆ ಉತ್ತಮ ಬೆಳಕೂ ಇಲ್ಲ. ಆದರೂ ಈಕೆಯ ಓದಿಗೆ ಅದು ಅಡ್ಡಿಯಾಗಿಲ್ಲ. ತನ್ನ ಶಾಲೆಯ ಕೆಲ ವಿದ್ಯಾರ್ಥಿನಿಯರು ಹಿಜಾಬ್ ಗಾಗಿ ಹೋರಾಡುತ್ತಿದ್ದರೆ, ಗಾಯತ್ರಿ ಸದ್ದುಗದ್ದಲವಿಲ್ಲದೆ ಓದಿ 625 ಕ್ಕೆ 625 ಅಂಕ ಪಡೆದು ಮಂದಹಾಸ ಬೀರಿದ್ದಾಳೆ.
ಉಡುಪಿ ಕುಂಜಿಬೆಟ್ಟುವಿನಲ್ಲಿ ಗಾಯತ್ರಿಯ ಪುಟ್ಟ ಮನೆ ಇದೆ. ಕಡುಬಡತನದ ಕುಟುಂಬ ಇವರದ್ದು. ಇದೀಗ ಈಕೆಯ ಸಾಧನೆಯಿಂದ ಮನೆಯವರು ತುಂಬಾ ಖುಷಿಯಾಗಿದ್ದಾರೆ. ಇವಳ ಇಚ್ಛೆಯಂತೆ ಮುಂದಿನ ವಿದ್ಯಾಭ್ಯಾಸ ಮುಂದುವರೆಸುವುದಾಗಿ ಹೇಳಿದ್ದಾರೆ.
ಕಾರ್ಡಿಯಾಲಜಿಸ್ಟ್ ಅಗುವ ಕನಸು ಗಾಯತ್ರಿಯದ್ದು. ಸರಕಾರಿ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶಪಾಲ್ ಸುವರ್ಣ ಈಕೆಯ ಮುಂದಿನ ವಿದ್ಯಾಭ್ಯಾಸಕ್ಕೆ ನೆರವು ನೀಡುವ ಭರವಸೆ ನೀಡಿದ್ದಾರೆ. ಒಟ್ಟಾರೆ ಹಿಜಾಬ್ ಮುಖ್ಯ ಎಂದ ಆರು ಹುಡುಗಿಯರಿಗೆ ಸಾಧನೆ ಮೂಲಕ ಅದೇ ಕಾಲೇಜಿನ ಗಾಯತ್ರಿ ದಿಟ್ಟ ಉತ್ತರ ಮತ್ತು ಸಂದೇಶ ನೀಡಿದ್ದಾಳೆ.
PublicNext
21/05/2022 06:43 pm