ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಕ್ಕುಪತ್ರವಿದ್ದರೂ ದಲಿತ ಕುಟುಂಬ ಮನೆ ಕಟ್ಟದಂತೆ ಅಧಿಕಾರಿಗಳ ಒತ್ತಡ!

ಮಂಗಳೂರು: ಸರಕಾರದಿಂದ ಮಂಜೂರಾದ ಜಾಗದಲ್ಲಿ ಮನೆ ನಿರ್ಮಿಸಲು ಮುಂದಾದ ದಲಿತ ಕುಟುಂಬವೊಂದಕ್ಕೆ ಸ್ಥಳೀಯ ಪಂಚಾಯತ್ ಅಧಿಕಾರಿಗಳು ಹಾಗೂ ಮಾಜಿ ಸದಸ್ಯರು ಸೇರಿಕೊಂಡು ದೌರ್ಜನ್ಯ ನಡೆಸಿರುವ ಘಟನೆ ನಗರ ಹೊರವಲಯದ ನೀರುಮಾರ್ಗದಲ್ಲಿ ನಡೆದಿದೆ.

ಈ ಕುರಿತು ನಗರದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ದಲಿತ ಹೋರಾಟ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಎಸ್.ಪಿ. ಆನಂದ, ಮೋಹನ್ ಹಾಗೂ ಪ್ರೇಮ ಯಾನೆ ಸವಿತ ದಂಪತಿ ಕಳೆದ ಹಲವು ವರುಷಗಳ ಹಿಂದೆಯೇ ಸರ್ವೇ ನಂಬರ್ 109/1 ರ ಹಕ್ಕುಪತ್ರ ಪಡೆದಿರುತ್ತಾರೆ. ಆದರೆ ಆರ್ಥಿಕ ಹೊಂದಾಣಿಕೆ ಸಾಧ್ಯವಾಗದ ಕಾರಣದಿಂದ ಜಮೀನಿನಲ್ಲಿ ಮನೆ ಕಟ್ಟಲು ಅವರಿಗೆ ಸಾಧ್ಯವಾಗಿರಲಿಲ್ಲ.

ಇತ್ತೀಚೆಗೆ ಅವರು ಮನೆ ಕಟ್ಟಲು ಮುಂದಾದಾಗ ಗುರುಪುರ ನಾಡಕಚೇರಿಯ ಉಪತಹಶೀಲ್ದಾರ್ ಶಿವಪ್ರಸಾದ್, ನೀರುಮಾರ್ಗ ಗ್ರಾಮ ಪಂಚಾಯತ್ ಪಿಡಿಓ ಸುಧೀರ್, ಗ್ರಾಮ ಕರಣಿಕರ ಉಗ್ರಾಣಿ ಭಾಸ್ಕರ್ ಎಂಬವರು ಸೇರಿ ಸ್ಥಳೀಯ ಗ್ರಾಮ ಪಂಚಾಯತ್ ಮಾಜಿ ಸದಸ್ಯೆಯರಾದ ಪವಿತ್ರ, ಉಷಾ ನಾಯ್ಕ್ ಮತ್ತು ನಾಗೇಶ್ ಗೌಡ, ಪದ್ಮಾವತಿ ಶೆಟ್ಟಿ ಹಾಗೂ ಸುಶೀಲ ಎಂಬವರ ಕುಮ್ಮಕ್ಕಿನಿಂದ ಡಿಸೆಂಬರ್ 7 ನೇ ತಾರೀಕಿನಂದು ಮೋಹನ್ ದಂಪತಿಯ ಜಮೀನಿಗೆ ತಂತಿ ಬೇಲಿ ಅಳವಡಿಸಿ ಇದು ಅಂಗನವಾಡಿ, ಬೀಡಿ ಬ್ರಾಂಚ್ ಹಾಗೂ ಇನ್ನಿತರ ಉದ್ದೇಶಕ್ಕಾಗಿ ಮೀಸಲಿರಿಸಿದ ಜಾಗ ಎಂದು ಅಕ್ರಮವೆಸಗುತ್ತಿದ್ದಾರೆ.

ಈಗಾಗಲೇ ಈ ಕುರಿತು ತಹಶೀಲ್ದಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ, ಶಾಸಕರಿಗೂ ದೂರು ನೀಡಲಾಗಿದ್ದು ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ. ಆದರೆ ಈ ಮಧ್ಯೆ ಮನೆ ಕಟ್ಟಲು ಮುಂದಾಗುತ್ತಿದ್ದಂತೆ ದಲಿತ ಕುಟುಂಬದ ಮೇಲಾದ ಅನ್ಯಾಯ ಖಂಡನಾರ್ಹ‌.

ದಲಿತ ಕುಟುಂಬವನ್ನ ಸ್ಥಳೀಯ ಅಧಿಕಾರಿಗಳು ಟಾರ್ಗೆಟ್ ಮಾಡುತ್ತಿರುವುದು ಯಾಕಾಗಿ ಎಂದು ತಿಳಿಯಬೇಕಿದೆ.‌ ತಕ್ಷಣವೇ ಅನ್ಯಾಯವೆಸಗಿದ ಅಧಿಕಾರಿಗಳ ವರ್ಗಾವಣೆ ಮಾಡಬೇಕಿದೆ.‌

ಇಲ್ಲದೇ ಹೋದಲ್ಲಿ ಯಾವುದೇ ರೀತಿಯ ಉಗ್ರ ಹೋರಾಟಕ್ಕೂ ನಾವು ಸಿದ್ದರಿದ್ದೇವೆ ಎಂದರು. ಸುದ್ದಿಗೋಷ್ಟಿಯಲ್ಲಿ ನೊಂದ ಕುಟುಂಬದ ಮೋಹನ್ ಹಾಗೂ ಪ್ರೇಮಾ ಯಾನೆ ಸವಿತ, ವಿಶು ಕುಮಾರ್ ಮುಲ್ಕಿ ಮತ್ತಿತ್ತರರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

11/12/2020 01:37 pm

Cinque Terre

18.06 K

Cinque Terre

1