ಇರ್ಷಾದ್ ಕಿನ್ನಿಗೋಳಿ, ಪಬ್ಲಿಕ್ ನೆಕ್ಸ್ಟ್, ಮಂಗಳೂರು
ಮಂಗಳೂರು: ಸಾಮಾನ್ಯವಾಗಿ ಕರಾವಳಿ ಭಾಗದ ಸೇತುವೆಗಳಲ್ಲಿ ಕತ್ತಲು ಆವರಿಸುತ್ತಿದ್ದಂತೆ ಮೀನಿಗೆ ಗಾಳ ಹಾಕೋ ಹವ್ಯಾಸಿ ಮೀನುಗಾರರ ತಂಡವನ್ನ ಕಾಣಲು ಸಾಧ್ಯವಾಗುತ್ತದೆ.
ಆದರೆ ಇಲ್ಲೊಂದು ಸೇತುವೆ ಅದೆಲ್ಲಕ್ಕೂ ವಿಭಿನ್ನವಾಗಿದೆ. ಇದೊಂದು ಪ್ರೇಕ್ಷಣೀಯ ಸ್ಥಳವಾಗಿಯೂ ಬದಲಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಾಣಸಿಗುವಷ್ಟರ ಮಟ್ಟಿಗೆ ವಿಶಾಲವಾದ ಈ ಸೇತುವೆ ಮಧ್ಯಾಹ್ನದ ಸೂರ್ಯ ಇಳಿಮುಖವಾಗುತ್ತಲೇ ಜನರ ಆಕರ್ಷಣೆಯನ್ನ ಪಡೆಯುತ್ತದೆ.
ಸಾಯಂಕಾಲದ ವಾಕಿಂಗ್ ಹೋಗೋರಿಗೆ ಈ ಸೇತುವೆ ಮೇಲೆ ನಿಂತು ಅತ್ತ ನೀರು, ಇತ್ತ ಮುಳುಗೋ ಸೂರ್ಯನನ್ನ ನೋಡೋ ಕಾತರ. ಅಂದಹಾಗೆ ತಳದಲ್ಲಿ ನಂದಿನಿ ಹರಿದು ಹೋಗಲು ಅವಕಾಶ ನೀಡಿರೊ ಈ ವಿಶಾಲವಾದ ಸೇತುವೆ ಕಾಣಸಿಗೋದು ಮಂಗಳೂರು ನಗರ ಹೊರವಲಯದ ಹಳೆಯಂಗಡಿಯ ಕದಿಕೆಯಲ್ಲಿ.
‘ಕದಿಕೆ ಸೇತುವೆ‘ ಎಂದೇ ಹೆಸರು ಪಡೆದಿರೋ ಈ ಸೇತುವೆ ಜನರ ಪಾಲಿಗೆ ಅತ್ಯಂತ ಪ್ರಮುಖ ಸಂಪರ್ಕ ಕೊಂಡಿ. ಈ ಸೇತುವೆಯಾದಿಯಾಗಿ ಸಸಿಹಿತ್ಲು ಶ್ರೀಭಗವತಿ ಅಮ್ಮನ ಕ್ಷೇತ್ರಕ್ಕೂ, ಸುಂದರ ಕ್ಷಣ ಕಳೆಯಲು ಸಸಿಹಿತ್ಲು ಎಂಡ್ ಪಾಯಿಂಟ್ ಬೀಚ್ ಗೂ ತೆರಳಲು ದಾರಿಯಾಗಿ ಈ ಸೇತುವೆ ನಿಂತಿದೆ.
ಆದರೆ ಬೀಚ್, ದೇಗುಲಕ್ಕೆ ತೆರಳೋ ಪ್ರವಾಸಿಗರು ಒಂದೊಮ್ಮೆ ಕಾರನ್ನ ಸೈಡ್ ಗೆ ಹಾಕಿ ಈ ಸೇತುವೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಮಾತ್ರವಲ್ಲದೇ ಸೂರ್ಯಾಸ್ತವನ್ನ ವೀಕ್ಷಿಸುತ್ತಾರೆ.
ಯಾವುದೇ ಸಾರ್ವಜನಿಕ ಸಾರಿಗೆಗಳ ಓಡಾಟ ಇಲ್ಲದಿರುವುದು ಕೂಡಾ ಈ ಸೇತುವೆ ತನ್ನತ್ತ ಕೈಬೀಸಿ ಸೆಳೆಯಲು ಕಾರಣವಾಗುತ್ತದೆ. ಎರಡೂವರೆ ವರುಷಗಳ ಹಿಂದೆ ಈ ಸೇತುವೆಯನ್ನ ಉದ್ಘಾಟಿಸಿದ ಆರಂಭದಲ್ಲಿ ಮೀನು ಹಿಡಿಯೋ ಹವ್ಯಾಸಿ ಯುವಕರು ಮಾತ್ರ ಇದರ ಮೇಲೆ ನಿಂತು ಕಾಲ ಕಳೆಯುತ್ತಿದ್ದರು.
ಆದರೆ ಈಗ ಪ್ರವಾಸಿಗರೂ, ಸ್ಥಳೀಯರಿಗೂ ಈ ಸೇತುವೆ ಒಂದು ರೀತಿಯ ಆಕರ್ಷಣೀಯ ಸ್ಥಳವಾಗಿದೆ. ಪ್ರಕೃತಿ ರಮಣೀಯ ಈ ತಾಣದಲ್ಲಿರುವ ‘ಕದಿಕೆ ಸೇತುವೆ‘ಗೆ ಬರೋ ಪ್ರವಾಸಿಗರನ್ನ ನಂಬಿಯೇ ಇಲ್ಲೊಂದಿಷ್ಟು ಸಣ್ಣ ಸಣ್ಣ ಗೂಡಂಗಡಿಗಳೂ ತೆರೆದುಕೊಂಡಿವೆ. ಅಷ್ಟರ ಮಟ್ಟಿಗೆ ‘ಕದಿಕೆ ಸೇತುವೆ‘ ಸ್ಥಳೀಯವಾಗಿ ಪ್ರವಾಸಿಗರ ಆಕರ್ಷಣೆಗೆ ಒಳಗಾಗಿದೆ.
Kshetra Samachara
06/12/2020 10:38 am