ಬಂಟ್ವಾಳ: ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಫೈರೋಜ್ ಮತ್ತು ಸುಜಿತ್ ಎಂಬವರನ್ನು ಕೂಡಲೇ ತನ್ನ ವಾಹನದಲ್ಲಿ ಕರೆದುಕೊಂಡು ಹೋಗಿ ಮಂಗಳೂರಿನಲ್ಲಿ ತುರ್ತು ಚಿಕಿತ್ಸೆ ಒದಗಿಸಲು ನೆರವಾಗಿ ಪ್ರಾಣ ಉಳಿಸಿದ ಬಂಟ್ವಾಳ ತಾಲೂಕಿನ ವಗ್ಗ ಎಂಬಲ್ಲಿಯ ಹರೀಶ್ ಮತ್ತವರ ಸ್ನೇಹಿತರಾದ ಜಗದೀಶ್, ಜನಾರ್ದನ ಗಾಣಿಗ, ರಾಜೇಶ್ ಅವರ ನೆರವಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.
ಈ ಕುರಿತು ಮಂಗಳೂರಿನ ಹಿರಿಯ ಪತ್ರಕರ್ತ ಮಹಮ್ಮದ್ ಆರೀಫ್ ಪಡುಬಿದ್ರಿ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಬಂಟ್ವಾಳದ ಹರೀಶ್ ಅವರ ಮಾನವೀಯ ಕಾರ್ಯ ಪ್ರಶಂಸಿಸಿದ್ದಾರೆ. ಇವರ ಈ ಸೇವಾ ಮನೋಭಾವವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.
ಬಂಟ್ವಾಳದ ಬೈಪಾಸ್ ಬಳಿ ಗುರುವಾರ ರಾತ್ರಿ ಸುಜಿತ್ ಮತ್ತು ಫೈರೋಜ್ ವಿದ್ಯುತ್ ಸ್ಪರ್ಶದಿಂದ ಗಾಯಗೊಂಡಿದ್ದ ಸಂದರ್ಭ ನೆರವಿಗೆ ಹರೀಶ್ ಮತ್ತಿತರರು ಧಾವಿಸಿದ್ದಾರೆ. ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದ ಸಂದರ್ಭ ಅಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ಬಡ ಕುಟುಂಬದ ಫೈರೋಜ್ ಅವರಿಗೆ ಚಿಕಿತ್ಸೆ ನೀಡುವ ಕುರಿತು ಏನು ಮಾಡುವುದು ಎಂದು ತೋಚದಿದ್ದಾಗ ಹಿರಿಯ ಪತ್ರಕರ್ತ ಆರೀಫ್ ಪಡುಬಿದ್ರಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಆರೀಫ್ ಅವರು ಎಂ. ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಗ್ರೂಪ್ ಗೆ ವಿಷಯ ತಿಳಿಸಿ, ಗ್ರೂಪಿನ ಸದಸ್ಯರಾದ ಡಾ.ಮುಬಶ್ಶಿರ್, ಕಳವಾರು ಮೊಹಮ್ಮದ್, ಅಬೂಬಕರ್ ಗ್ರೂಪ್ ಮತ್ತಿತರರ ನೆರವು ಹಾಗೂ ಸಮಾಜಸೇವಕ ಝಿಯಾ ಅಹ್ಮದ್, ಝಕರಿಯಾ ಫರ್ವೇಝ್ ಹಾಗೂ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಜಗನ್ನಾಥ್ ಸಲಹೆ ಪಡೆದು ಫೈರೋಜ್ ಅವರಿನ ಮುಂದಿನ ಚಿಕಿತ್ಸೆ ಕುರಿತು ನೆರವಾದರು. ಇದೇ ವೇಳೆ ಕಾರು ಚಾಲಕ- ಮಾಲೀಕರಾಗಿರುವ ವಗ್ಗದ ಹರೀಶ್ ಮತ್ತವರ ತಂಡ ಫೈರೋಜ್ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಅವರಿಗೆ ಅಗತ್ಯವಾಗಿ ಬೇಕಾದ ರಕ್ತ ಮತ್ತಿತರ ನೆರವನ್ನು ನೀಡುವುದರ ಮೂಲಕ ಸಹಾಯ ಮಾಡುತ್ತಿದ್ದು, ಫೈರೋಜ್ ಅವರು ಚೇತರಿಸಿಕೊಳ್ಳಲು ನೆರವಾದರು.
ಈ ವಿಷಯದ ಕುರಿತು ಪತ್ರಕರ್ತ ಆರೀಫ್ ಪಡುಬಿದ್ರಿ ತನ್ನ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು, ಅದೀಗ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ.
Kshetra Samachara
30/10/2020 07:11 pm