ಉಡುಪಿ: ಆನ್ ಲೈನ್ ತರಗತಿ ಗ್ರಾಮೀಣ ಮಕ್ಕಳಿಗೆ ಎಷ್ಟು ಪರಿಣಾಮಕಾರಿ? ಅದರ ಪ್ರಯೋಜನ ಗ್ರಾಮೀಣ, ಬಡ ವಿದ್ಯಾರ್ಥಿಗಳಿಗೆ ನಿಜಕ್ಕೂ ಸಿಗುತ್ತಾ? ಇಷ್ಟಕ್ಕೂ ಎಲ್ಲ ಗ್ರಾಮೀಣ ಬಡ ವಿದ್ಯಾರ್ಥಿಗಳ ಬಳಿ ಮೊಬೈಲ್ ಇರುತ್ತಾ ಎಂಬ ಚರ್ಚೆ ನಡೆಯುತ್ತಿದೆ.
ಈ ಚರ್ಚೆಯ ನಡುವೆಯೇ ಉಡುಪಿ ಜಿಲ್ಲೆಯ ಮೂವರು ವಿದ್ಯಾರ್ಥಿನಿಯರು ಬಡ ವಿದ್ಯಾರ್ಥಿಗಳಿಗೆ ಮೊಬೈಲ್ ಖರೀದಿಸಿ ಸದ್ದಿಲ್ಲದೇ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಇವರು ಅವನಿ, ಕೇಕಿ, ಅದಿತ್ರಿ ಎಂಬ ಮೂವರು ವಿದ್ಯಾರ್ಥಿನಿಯರು. ಉಡುಪಿಯ ಖಾಸಗಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ಸಂದರ್ಭ ಆನ್ ಲೈನ್ ಕ್ಲಾಸ್ ಗಾಗಿ ಮೊಬೈಲ್ ಇಲ್ಲದ ವಿದ್ಯಾರ್ಥಿಗಳಿಗಾಗಿ ತಮ್ಮ ಪಾಕೆಟ್ ಮನಿಯಿಂದ ಮೊಬೈಲ್ ಖರೀದಿಸಿ ಕೊಟ್ಟು ಮಾನವೀಯತೆ ಮೆರೆದಿದ್ದರು.
ಬಳಿಕ ಈ ವಿದ್ಯಾರ್ಥಿನಿಯರ ಸಾಮಾಜಿಕ ಕಳಕಳಿ ಗಮನಿಸಿದ ಪೋಷಕರು ಮತ್ತು ದಾನಿಗಳ ಸಹಾಯದಿಂದ ಈ ತನಕ 47 ವಿದ್ಯಾರ್ಥಿಗಳಿಗೆ ಮೊಬೈಲ್ ಖರೀದಿಸಿ ಕೊಟ್ಟಿದ್ದಾರೆ.
ಇಷ್ಟಕ್ಕೂ ಇವರೇನೂ ಭಾರೀ ಶ್ರೀಮಂತರ ಮಕ್ಕಳಲ್ಲ, ದುಡಿಯುವವರೂ ಅಲ್ಲ. ಆದರೂ ಈ ವಿದ್ಯಾರ್ಥಿನಿಯರ ಹೃದಯ ಬಡ ಮಕ್ಕಳಿಗಾಗಿ ಮಿಡಿದಿದೆ. ಬಡ ವಿದ್ಯಾರ್ಥಿಗಳೂ ಆನ್ ಲೈನ್ ವಿದ್ಯಾಭ್ಯಾಸದಿಂದ ವಂಚಿತರಾಗಬಾರದು ಎಂಬ ಕಳಕಳಿ ಇವರದು. ನಿಜಕ್ಕೂ ಈ ವಿದ್ಯಾರ್ಥಿನಿಯರ ಮಾನವೀಯ ಕೆಲಸ ಶ್ಲಾಘನೀಯ, ಮಾದರಿ.
Kshetra Samachara
26/10/2020 05:52 pm