ಉಡುಪಿ: ಸಾಮಾನ್ಯ ಮಾನಸಿಕ ಆರೋಗ್ಯದ ಬಗ್ಗೆ ಅ ಧಿಕಾರಿಗಳು,ಸೂಪರ್ ಸ್ಪೆಷಲಿಸ್ಟ್ ಗಳು, ವೃತ್ತಿಪರರಲ್ಲಿ ಮಾಹಿತಿ ಕಡಿಮೆಯಿದೆ. ಮಾನಸಿಕ ಆರೋಗ್ಯಕ್ಕೆ ಜಾಗತಿಕ ಆದ್ಯತೆ ಅಗತ್ಯ. ಕೋವಿಡ್ ನಂತರ ವೈದ್ಯರು, ಆರೋಗ್ಯ ಕಾರ್ಯಕರ್ತರಲ್ಲಿ ಕಾರ್ಯದೊತ್ತಡ, ಶೇ.25ರಷ್ಟು ಆತಂಕ, ಖನ್ನತೆ ಹೆಚ್ಚಿದೆ. ದಿನಕ್ಕೆ 6ರಿಂದ 8ಗಂಟೆ ನಿದ್ದೆ, ದೈಹಿಕ ವ್ಯಾಯಾಮ, ಅನ್ಯರೊಂದಿಗೆ ಮಾತುಕತೆ ಮೂಲಕ ಒತ್ತಡ ನಿವಾರಣೆ - ಇವು ದೈಹಿಕ ಮತ್ತು ಮಾನಸಿಕ ಆರೋಗ್ಯದ ತ್ರಿಸೂತ್ರಗಳು ಎಂದು ಐಎಂಎ ಉಡುಪಿ ಕರಾವಳಿ ನೂತನ ಅಧ್ಯಕ್ಷ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಅವರು ಬ್ರಹ್ಮಗಿರಿಯ ಐಎಂಎ ಭವನದ ಸಭಾಂಗಣದಲ್ಲಿ ಕಮಲ್ ಎ. ಬಾಳಿಗಾ ಚಾರಿಟೇಬಲ್ ಟ್ರಸ್ಟ್ ( ಮುಂಬೈ), ದೊಡ್ಡಣಗುಡ್ಡೆಯ ಡಾ. ಎ.ವಿ. ಬಾಳಿಗಾ ಸ್ಮಾರಕ ಆಸ್ಪತ್ರೆ, ಭಾರತೀಯ ವೈದ್ಯಕೀಯ ಸಂಘ ಉಡುಪಿ-ಕರಾವಳಿ, ಭಾರತೀಯ ಮನೋವೈದ್ಯಕೀಯ ಸಂಘ - ದಕ್ಷಿಣ ವಲಯ, ಸಮುದಾಯ ಜಾಗೃತಿ ಕೋಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಸಹಯೋಗದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶೆ ಹಾಗೂ ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್,ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಉಡುಪಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಲತಾ ನಾಯಕ್, ಐಎಂಎ ಉಡುಪಿ ಕರಾವಳಿ ನಿಕಟಪೂರ್ವ ಅಧ್ಯಕ್ಷ ಡಾ.ವಿನಾಯಕ ಶೆಣೈ ,ಡಾ.ಮಾನಸ್, ಡಾ.ಮನು ಆನಂದ್ ಉಪಸ್ಥಿತರಿದ್ದರು. ಪದ್ಮಾ ರಾಘವೇಂದ್ರ ನಿರೂಪಿಸಿ, ಸೌಜನ್ಯಾ ಶೆಟ್ಟಿ ವಂದಿಸಿದರು. ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Kshetra Samachara
10/10/2022 02:18 pm