ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್, ಮತ್ತು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ವಿಧಿ ವಿಜ್ಞಾನ ವಿಭಾಗ, ಮಾಹೆ ಮಣಿಪಾಲದ ಸಹಯೋಗದೊಂದಿಗೆ ಮಣಿಪಾಲದ ಡಾ ಟಿಎಂಎ ಪೈ ಹಾಲ್ ನಲ್ಲಿ "ಸಂರಕ್ಷಕರ ವಿರುದ್ಧ ಹಿಂಸೆ " ಕುರಿತು ವೈದ್ಯಕೀಯ ಶಿಕ್ಷಣ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂರಕ್ಷಕರ ವಿರುದ್ಧ ಹಿಂಸೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಹಿಂಸಾಚಾರದ ಘಟನೆಗೆ ಒಂದು ತಂಡವಾಗಿ ಪ್ರತಿಕ್ರಿಯಾತ್ಮಕ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವನ್ನು ಎತ್ತಿ ತೋರಿಸುವುದು ಕಾರ್ಯಕ್ರಮದ ಉದ್ದೇಶವಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎನ್ ಶಶಿಕುಮಾರ್ ಐಪಿಎಸ್ ಅವರು , "ಸಂರಕ್ಷಕರ ಮೇಲಿನ ಹಿಂಸೆಯು ಕೇವಲ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗಿಲ್ಲ, ಇದು ಪೋಲಿಸ್, ಕಂದಾಯ ಇಲಾಖೆ, ಸ್ಥಳೀಯ ಆಡಳಿತ , ಮಾಧ್ಯಮ, ಇತ್ಯಾದಿ ಇತರ ಇಲಾಖೆಗಳ ಕೆಲಸಗಾರರ ಮೇಲೆ ಸಹ ನಡೆಯುತ್ತಿದೆ. ಮೆಡಿಕೇರ್ ಸೇವಾ ಸಿಬ್ಬಂದಿಯ ಮೇಲಿನ ಹಿಂಸೆ ಮತ್ತು ಮೆಡಿಕೇರ್ ಸೇವಾ ಸಂಸ್ಥೆಗಳಲ್ಲಿ ಆಸ್ತಿ ಹಾನಿಗೆ ಸಂಬಂದಿಸಿದ ಕಾನೂನನ್ನು ಕರ್ನಾಟಕದಲ್ಲಿ 2009 ರಲ್ಲಿ ಪರಿಚಯಿಸಲಾಯಿತು. ಎಲ್ಲ ವೈದ್ಯರಿಗೆ ನನ್ನ ಸಲಹೆಯೆಂದರೆ ತಾವೆಲ್ಲರೂ ಸ್ಥಳೀಯ ಪೊಲೀಸ್ ಠಾಣೆಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು ಮತ್ತು ಇಂತಹ ಅಹಿತಕರ ಘಟನೆ ಸಂಭವಿಸಿದಲ್ಲಿ ತಕ್ಷಣ ಸ್ಥಳೀಯ ಪೊಲೀಸರಿಗೆ ವರದಿ ಮಾಡಿ " ಎಂದರು.
ಮಂಗಳೂರಿನ ಪೊಲೀಸ್ ಆಯುಕ್ತರಾದ ಶ್ರೀ ಎನ್ ಶಶಿಕುಮಾರ್, ಐಪಿಎಸ್ ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದರು. ಡಾ.ಎಚ್ ಎಸ್ ಬಲ್ಲಾಳ್- ಸಹ ಕುಲಾಧಿಪತಿಗಳು, ಮಾಹೆ ಮಣಿಪಾಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ಶರತ್ ಕುಮಾರ್, ಡೀನ್, ಕೆಎಂಸಿ, ಡಾ.ಅವಿನಾಶ್ ಶೆಟ್ಟಿ, ವೈದ್ಯಕೀಯ ಅಧೀಕ್ಷಕರು, ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ, ಡಾ.ವಿನೋದ್ ಸಿ ನಾಯಕ್, ಸಂಯೋಜಕರು, ಸೆಂಟರ್ ಫಾರ್ ಕ್ಲಿನಿಕಲ್ ಮತ್ತು ಇನ್ನೋವೇಟಿವ್ ಫೋರೆನ್ಸಿಕ್ಸ್ ಮತ್ತು ವಿಧಿ ವಿಜ್ಞಾನ ವಿಭಾಗದ ಮುಖ್ಯಸ್ತರಾದ ಡಾ.ವಿಕ್ರಮ್ ಪಲಿಮಾರ್ ಉಪಸ್ಥಿತರಿದ್ದರು.
Kshetra Samachara
02/09/2021 04:45 pm