ಮಂಗಳೂರು: ತುಳುನಾಡಿನಲ್ಲಿಅಟಿ ಅಮಾವಾಸ್ಯೆ ಆಚರಣೆಗೆ ವಿಶೇಷ ಸ್ಥಾನಮಾನವಿದೆ. ಅದರಲ್ಲಿ ಪಾಲೆ ಮರದ ಕಷಾಯದ ವೈಶಿಷ್ಟ್ಯವೂ ಒಂದು.ಆಷಾಢ ಮಾಸದಲ್ಲಿ ಯಾವುದೇ ಬೆಳೆ ಫಸಲು ಕೊಡುವುದಿಲ್ಲ. ಈ ತಿಂಗಳಲ್ಲಿ ವಾತಾವರಣದಲ್ಲಿ ಆಗುವ ಬದಲಾವಣೆ ಮಾನವನ ಮೇಲೂ ಪರಿಣಾಮ ಬೀರುತ್ತದೆ. ನಿರಂತರ ಮಳೆ ಸುರಿಯುವುದರಿಂದ ರೋಗ ರುಜಿನಗಳು ಹೆಚ್ಚಾಗುವ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಆರೋಗ್ಯವನ್ನು ಉತ್ತಮವಾಗಿರಿಸಲು ಕಷಾಯ ಕುಡಿಯುತ್ತಾರೆ.
ಆರೋಗ್ಯದ ದೃಷ್ಟಿಯಿಂದ ತುಳುನಾಡಿನ ಜನರು ಕಷಾಯ ಕುಡಿಯುವ ಪದ್ಧತಿಯನ್ನು ಪಾಲಿಸುತ್ತಿದ್ದಾರೆ. ಈ ಕಷಾಯವನ್ನು ಪಾಲೆ(ಹಾಲೆ) ಮರದ ತೊಗಡೆಯಿಂದ ಮಾಡುತ್ತಾರೆ. ಈ ಮರ ಸಾವಿರ ಪಾಲಷ್ಟು ಔಷಧೀಯ ಗುಣಗಳನ್ನು ಹೊಂದಿದ್ದು, ಖಾಲಿ ಹೊಟ್ಟೆಗೆ ಸೇವಿಸುತ್ತಾರೆ. ಪಾಲೆ ಮರ ದಪ್ಪವಾಗಿದ್ದು ಒಂದು ಗೊಂಚಲಿನಲ್ಲಿ 7 ಎಲೆಗಳನ್ನು ಹೊಂದಿದೆ. ಹಾಗಾಗಿ ಈ ಮರವನ್ನು ಸಪ್ತಪಣಿ ಎಂದು ಕರೆಯುವುದುಂಟು. ಈ ಮರದ ತೊಗಟೆಯನ್ನು ಕೆತ್ತಿದಾಗ ಹಾಲಿನ ರೂಪದಲ್ಲಿ ರಸ ಚೆಲ್ಲುತ್ತದೆ. ಈ ರಸವು ಆಟಿಯಲ್ಲಿ ಔಷಧೀಯ ಸತ್ವಗಳನ್ನು ಒಳಗೊಂಡಿದ್ದು ಆರೋಗ್ಯವನ್ನು ಕಾಪಾಡುತ್ತದೆ.
ಅಮಾವಾಸ್ಯೆಯ ಹಿಂದಿನ ದಿನ ಪಾಲೆ ಮರದ ಬಳಿ ತೆರಲಿ ಗುರುತು ಹಿಡಿದು ಬರುತ್ತಾರೆ. ಮರುದಿನ ಸೂರ್ಯೋದಕ್ಕೂ ಮುನ್ನ ಎದ್ದು ಬೆತ್ತಲೆಯಲ್ಲಿ ಪಾಲೆ ಮರದ ಹತ್ತಿರ ಹೋಗಿ ಕಲ್ಲಿನಿಂದ ಕೆತ್ತುತ್ತಾರೆ. ಲೋಹದಾಂಶ ಆ ಮರಕ್ಕೆ ತಾಗಿದರೆ ಔಷಧೀಯ ಗುಣ ನಾಶವಾಗುತ್ತದೆ ಎಂಬ ಕಾರಣಕ್ಕೆ ಕಲ್ಲಿನಿಂದ ಕೆತ್ತುತ್ತಾರೆ.
ಈ ಕೆತ್ತಿತಂದ ತೊಗಟೆಯನ್ನು ಓಮ, ಬೆಳ್ಳುಳ್ಳಿ, ಅರಿಶಿನ, ಕರಿ ಮೆಣಸು ಹಾಕಿ ಪುಡಿ ಮಾಡಿ ರಸ ತೆಗೆಯುತ್ತಾರೆ. ನಂತರ ಅದಕ್ಕೆ ಬಿಳಿಯಾದ ಕಲ್ಲನ್ನು ಬಿಸಿ ಮಾಡಿ ಮುಚ್ಚುತ್ತಾರೆ. ಈ ಕಷಾಯವನ್ನು ಕುಡಿಯುವುದರಿಂದ ಮಲೇರಿಯಾ, ಅತಿಸಾರ, ಚರ್ಮದ ಸಮಸ್ಯೆಗಳು ಮತ್ತು ಆಸ್ತಮಾ ಹೀಗೆ ಅನೇಕ ರೋಗಗಳನ್ನು ದೂರ ಮಾಡುತ್ತವೆ ಎಂಬ ನಂಬಿಕೆ. ಕಹಿ ರುಚಿಯನ್ನು ಹೊಂದಿರುವ ಈ ಔಷಧಿ ಮುಂದಿನ ಆಷಾಢದವರೆಗೆ ಆರೋಗ್ಯ ಉತ್ತಮವಾಗಿರಿಸುವಂತೆ ಮಾಡುತ್ತದೆ. ಈ ಕಷಾಯದಲ್ಲಿ ಉಷ್ಣದ ಅಂಶ ಅಡಕವಾಗಿರುವ ಕಾರಣ ಮೆಂತ್ಯೆ ಗಂಜಿ ತಿನ್ನುತ್ತಾರೆ.ಆದರೆ ಈ ಪಾಲೆ ಮರದ ಕಷಾಯವನ್ನು ಕುಡಿಯುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂಬ ನಂಬಿಕೆ ಇಂದಿಗೂ ಉಳಿದಿದೆ.
Kshetra Samachara
08/08/2021 10:45 am