ಮೂಡುಬಿದಿರೆ: ಕರಿಂಜೆಯ ಮಾರಿಂಜಗುಡ್ಡೆಯಲ್ಲಿರುವ ಘನತ್ಯಾಜ್ಯ ಘಟಕದಲ್ಲಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿಯಾಗುತ್ತಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಮೂಡುಬಿದಿರೆ ಪುರಸಭೆಯ ಅಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳು ಘಟಕವನ್ನು ಪರಿಶೀಲಿಸಿದರು. ತಿಂಗಳೊಳಗೆ ವೈಜ್ಞಾನಿಕ ರೀತಿಯಲ್ಲಿ ವಿಲೇ ಮಾಡುವ ಬಗ್ಗೆ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಮಾಧ್ಯಮದವರ ಜೊತೆ ಮಾತನಾಡಿದ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಬುಧವಾರದಿಂದಲೇ ಪೌರ ಕಾರ್ಮಿಕರನ್ನು ಘಟಕಕ್ಕೆ ಕಳುಹಿಸಿ ಪ್ಲಾಸ್ಟಿಕ್‍ಗಳನ್ನು ವಿಂಗಡನೆ ಮಾಡಲಾಗುವುದು. ತ್ಯಾಜ್ಯಗಳನ್ನು ಇನ್ಸಿನೆರೇಟರ್ ಮೆಷಿನ್‍ಗಳಿಗೆ ಹಾಕಿ ಸುಡುವ ಪ್ರಕ್ರಿಯೆಯನ್ನು ಮುಂದಿನ ದಿನಗಳಲ್ಲಿ ಮಾಡುತ್ತೇವೆ. ಘನ ತ್ಯಾಜ್ಯ ವಿಲೇವಾರಿ ಘಟಕದ ಸುತ್ತ ತಡೆಬೇಲಿಯನ್ನು ನಿರ್ಮಿಸುವಂತೆ ಮುಖ್ಯಾಧಿಕಾರಿಯವರಿಗೆ ಸೂಚಿಸಿದ್ದೇನೆ. ಇಲ್ಲಿನ ಸಮಸ್ಯೆಗಳನ್ನು ವೈಜ್ಞಾನಿಕ ರೀತಿಯಲ್ಲಿ ಪರಿಹರಿಸಲಾಗುವುದು ಎಂದರು.
ಗ್ರಾಮಸ್ಥ ಸತೀಶ್ ಭಂಡಾರಿ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಘಟಕವು 7 ವರ್ಷಗಳಿಂದ ಕಾರ್ಯ ನಿರ್ವಹಿಸುತಿದೆ. ಕೆಲವು ವರ್ಷಗಳಿಂದ ವೈಜ್ಞಾನಿಕವಾಗಿ ನಡೆಯುತ್ತಿತ್ತು. ಆದರೆ ಕಳೆದ ಆರು ತಿಂಗಳಿಂದ ಅವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಯಾಗುತ್ತಿದೆ ಎಂದರು.
ಪುರಸಭಾ ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಜಯಶ್ರೀ, ನಾಗರಾಜ ಪೂಜಾರಿ, ಸುರೇಶ್ ಕೋಟ್ಯಾನ್, ಸೌಮ್ಯ ಶೆಟ್ಟಿ, ದಿನೇಶ್ ಪೂಜಾರಿ, ಮುಖ್ಯಾಧಿಕಾರಿ ಇಂದು ಎಂ, ಪರಿಸರ ಅಭಿಯಂತರೆ ಶಿಲ್ಪಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
01/02/2021 10:36 pm