ಮುಲ್ಕಿ: ಮುಲ್ಕಿ ಸಮೀಪದ ಕಿಲ್ಪಾಡಿ ಪಂಚಾಯತ್ ವ್ಯಾಪ್ತಿಯ "ನನ್ನ ಪಂಚಾಯತಿ ನನ್ನ ಅಧಿಕಾರ - ನನ್ನಿಂದ ಜನರ ಸೇವೆ ಅಭಿಯಾನ" ವಿಶೇಷ ಗ್ರಾಮ ಸಭೆ ಮಂಗಳವಾರ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಪಂಚಾಯತ್ ಅಧ್ಯಕ್ಷೆ ಲೀಲಾವತಿ ವಹಿಸಿದ್ದರು. ಉಪಾಧ್ಯಕ್ಷ ಗೋಪಿನಾಥ ಪಡಂಗ, ಸದಸ್ಯರಾದ ದಮಯಂತಿ ಶೆಟ್ಟಿಗಾರ್, ವಿಕಾಸ್ ಶೆಟ್ಟಿ, ರಾಜೇಶ್ ಶೆಟ್ಟಿ, ಶಾಂತ ಲಲಿತ ಯಾದವ್ ಗ್ರಾಮಸ್ಥರ ವಿವಿಧ ಪ್ರಶ್ನೆಗಳಿಗೆ ಉತ್ತರಿಸಿದರು.
ಸಭೆಯಲ್ಲಿ ಕೃಷಿ ಅಧಿಕಾರಿ ಅಬ್ದುಲ್ ಬಶೀರ್ ಕೃಷಿ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿ ಪಂಚಾಯತ್ ವ್ಯಾಪ್ತಿಯಲ್ಲಿ ನೆರೆಯಿಂದ ಬೆಳೆ ಹಾನಿಯಾಗುವ ಮೊದಲೇ ಕೃಷಿ ವಿಮೆ ಮಾಡಿಸಿಕೊಳ್ಳಿ ಎಂದರು. ಪ್ರಧಾನಮಂತ್ರಿ ಸಮ್ಮಾನ್ ಯೋಜನೆ ನಿಧಿ ಹಣ ಪೋಲಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳಿಂದ ತನಿಖೆ ನಡೆಯುತ್ತಿದೆ. ಕೃಷಿಕರಿಗೆ ಅಧಿಕಾರಿಗಳ ಮೊಬೈಲ್ ಕರೆ ಬಂದರೆ ಸೂಕ್ತ ಉತ್ತರ ನೀಡುವಂತೆ ವಿನಂತಿಸಿದರು.
ಶಿಕ್ಷಣ ಇಲಾಖೆಯ ಅಧಿಕಾರಿ ನೀತಾ ತಂತ್ರಿ ಮಾತನಾಡಿ ಮಕ್ಕಳ ಕಲಿಯುವಿಕೆ ನಿರಂತರವಾಗಿರಲು ಸರಕಾರ ಪ್ರಯತ್ನ ಕೊಡುತ್ತಿದ್ದು ಸರಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ. ವಿದ್ಯೆಗೆ ಹೆತ್ತವರ ಪ್ರೋತ್ಸಾಹ ಅಗತ್ಯ ಎಂದರು.
ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಸುಲೋಚನ ಮಾತನಾಡಿ ಕೊರೊನ ಮೂರನೇ ಅಲೆಯ ಬಗ್ಗೆ ಮಕ್ಕಳು ಜಾಗೃತರಾಗಿ ಸರಕಾರದ ನಿಯಮಗಳನ್ನು ಪಾಲಿಸಲು ವಿನಂತಿಸಿದರು.
ಜಾನುವಾರು ಅಧಿಕಾರಿ ಸಂಪತ್ ಕುಮಾರ್ ಮಾತನಾಡಿ ಮುಲ್ಕಿ ಕಾರ್ನಾಡ್ ನಲ್ಲಿರುವ ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದ್ದು ಗ್ರಾಮಸ್ಥರು ಸಹಕರಿಸಬೇಕು ಹಾಗೂ ಪಶು ಆಸ್ಪತ್ರೆ ದುರಸ್ತಿ ಯಲ್ಲಿರುವುದರಿಂದ ಹಳೆ ಮೆಸ್ಕಾಂ ಇಲಾಖೆಯ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ ಪಂಚಾಯತ್ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಯಶಸ್ವಿಗೊಳಿಸುವಂತೆ ಗ್ರಾಮಸ್ಥರಲ್ಲಿ ಮನವಿ ಮಾಡಿದರು
ಸಭೆಗೆ ಮೆಸ್ಕಾಂ ಸಹಿತ ಅನೇಕ ಇಲಾಖೆ ಅಧಿಕಾರಿಗಳು ಗೈರುಹಾಜರಾಗಿರುವ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
03/08/2021 05:11 pm